ಪೆನ್ನು ಹಿಡಿವ ಕೈಗಳಿಲ್ಲಿ ಸೌಟು ಹಿಡಿದಿತ್ತು! ತಮ್ಮವರ ಹಸಿವು ನೀಗಿಸಿದ ಮಂಗಳೂರಿನ ಪತ್ರಕರ್ತರು

ಮಂಗಳೂರು, ಜೂ.೩- ಕೊರೋನಾ ಎರಡನೇ ಅಲೆಯ ವಿರುದ್ಧ ಸರಕಾರ ಘೋಷಣೆ ಮಾಡಿರುವ ಲಾಕ್ ಡೌನ್ ನಿಂದ ಜನಸಾಮಾನ್ಯರು ಇನ್ನಿಲ್ಲದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆ ಪತ್ರಕರ್ತರನ್ನು ಬಹಳಷ್ಟು ಕಾಡುತ್ತಿದೆ. ಸುದ್ದಿ ಸಂಗ್ರಹದ ಬೆನ್ನು ಬಿದ್ದು ನಗರದಲ್ಲಿ ಓಡಾಡುವ ಪತ್ರಕರ್ತರಿಗೆ ಹಿಂದಿನಂತೆ ಮಧ್ಯಾಹ್ನದ ಊಟಕ್ಕೆ ಹೋಟೆಲ್, ಕ್ಯಾಂಟೀನ್ ಗಳು ಲಭ್ಯವಿಲ್ಲ. ಪತ್ರಕರ್ತ ಮಿತ್ರರ ಹಸಿವು ನೀಗಿಸೋದು ಹೇಗೆ ಅಂತ ಯೋಚಿಸಿದ ಮಂಗಳೂರಿನ ಪತ್ರಕರ್ತರು ತಮ್ಮವರ ಹೊಟ್ಟೆ ತಣಿಸಲು ತಾವೇ ಶುಚಿ ರುಚಿಯಾದ ಊಟ ತಯಾರಿಸಿ ಬಡಿಸುವ ಪಣತೊಟ್ಟರು. ಹೀಗೇ ಪ್ರಾರಂಭವಾದ ಪತ್ರಕರ್ತರ ಮಧ್ಯಾಹ್ನದ ಗಂಜಿಯೂಟ ಯೋಜನೆ ಇಂದಿಗೆ ೩೬ ದಿನಗಳನ್ನು ಯಶಸ್ವಿಯಾಗಿ ಪೂರೈಸಿ ಮುನ್ನಡೆಯುತ್ತಿದೆ.

ಉರ್ವದಲ್ಲಿರುವ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪ್ರತಿನಿತ್ಯ ಮಧ್ಯಾಹ್ನ ೧ ಗಂಟೆಯಿಂದ ೨:೩೦ರ ತನಕ ಪತ್ರಕರ್ತರಿಗೆ ಉಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಪ್ರತಿನಿತ್ಯ ೪೦ಕ್ಕೂ ಹೆಚ್ಚು ಪತ್ರಕರ್ತರು ಗಂಜಿ ಊಟದ ರುಚಿ ಸವಿಯುತ್ತಿದ್ದಾರೆ. ಪತ್ರಿಕಾ ಭವನ ಟ್ರಸ್ಟ್, ಮಂಗಳೂರು ಪ್ರೆಸ್ ಕ್ಲಬ್ ಮತ್ತು ಕಾರ್ಯನಿರತ ಪತ್ರಕರ್ತರ ಸಂಘ ಸಹಯೋಗದಲ್ಲಿ ಮಧ್ಯಾಹ್ನ ಬಿಸಿ ಬಿಸಿ ಗಂಜಿ ಊಟ ತಯಾರಾಗುತ್ತಿದೆ. ಪ್ರೆಸ್ ಕ್ಲಬ್ ಇದರ ಜವಾಬ್ದಾರಿ ಹೊತ್ತಿದ್ದು ಪ್ರತಿನಿತ್ಯ ೪೦ರಿಂದ ೫೦ ಮಂದಿ ಪತ್ರಕರ್ತರು ಊಟದ ರುಚಿ ಸವಿಯುತ್ತಿದ್ದಾರೆ. ಉಪ್ಪಿನಕಾಯಿ, ಚಟ್ನಿ, ಪಲ್ಯ, ಗಂಜಿ, ಸಾಂಬಾರು, ಪಾಯಸ ಇವೆಲ್ಲ ನಿತ್ಯದ ಮೆನುವಿನಲ್ಲಿ ಇರುತ್ತಿದ್ದು ಒಂದು ಊಟಕ್ಕೆ ೫೦ ರೂ. ವೆಚ್ಚ ತಗಲುತ್ತದೆ ಅನ್ನುತ್ತಾರೆ ಹಿರಿಯ ಪತ್ರಕರ್ತ ಭಾಸ್ಕರ್ ರೈ ಕಟ್ಟ ಅವರು.

ಪತ್ರಕರ್ತರಾದ ಸುಖ್ ಪಾಲ್ ಪೊಳಲಿ, ಪುಷ್ಪರಾಜ್ ಶೆಟ್ಟಿ, ಪ್ರೆಸ್ ಕ್ಲಬ್ ಸಿಬ್ಬಂದಿ ಚಂಚಲಕ್ಕ ಇವರೆಲ್ಲ ನಿತ್ಯ ಅಡುಗೆ ತಯಾರಿಯಲ್ಲಿ ಶ್ರಮಿಸುತ್ತಿದ್ದರೆ ಭಾಸ್ಕರ್ ರೈ ಕಟ್ಟ ಉತ್ಸಾಹದಿಂದ ತಾವೇ ನಿಂತು ಅಡುಗೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ದೃಶ್ಯ ಮಾಧ್ಯಮದ ಕೆಮರಾ ಮ್ಯಾನ್ ಗಳು ತರಕಾರಿ ಹೆಚ್ಚುವಲ್ಲಿಂದ ಹಿಡಿದು ಪಾತ್ರೆ ತೊಳೆಯುವ ತನಕ ನೆರವಾಗುತ್ತಿದ್ದಾರೆ. ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಆನಂದ್ ಶೆಟ್ಟಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳರಂತಹ ಹಿರಿಯ ಪತ್ರಕರ್ತರು ನೆರವು ನೀಡುತ್ತಿದ್ದಾರೆ.

ರುಚಿ ಸವಿದ ಬಿಜೆಪಿ ರಾಜ್ಯಾಧ್ಯಕ್ಷ, ಕಮಿಷನರ್!

ಮಂಗಳೂರಿನಲ್ಲಿ ಪತ್ರಕರ್ತರಿಂದ ಪತ್ರಕರ್ತರಿಗಾಗಿ ಪ್ರಾರಂಭಗೊಂಡ ಗಂಜಿಯೂಟವನ್ನು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು,    ಹರಿಕೃಷ್ಣ ಬಂಟ್ವಾಳ್, ಜಗದೀಶ್ ಅಧಿಕಾರಿ, ಪ್ರಕಾಶ್ ಪಾಂಡೇಶ್ವರ ಸಹಿತ ಹಲವು ಮಂದಿ ಗಣ್ಯರು ರುಚಿ ನೋಡಿ ಪತ್ರಕರ್ತರ ಶ್ರಮವನ್ನು ಶ್ಲಾಘಿಸಿದ್ದಾರೆ. ಟೇಸ್ಟ್ ಮೇಕರ್, ಕಲರ್, ಅಡುಗೆ ಸೋಡಾ ಬಳಸದೆ ತಯಾರಾಗುವ ಪತ್ರಕರ್ತರ ಮಧ್ಯಾಹ್ನದ ಬಿಸಿಯೂಟ ಹೊಟ್ಟೆಗೂ ಹಿತವಾಗಿದೆ.

ಪತ್ರಕರ್ತರಿಂದಲೇ ಹೊರೆಕಾಣಿಕೆ ಸಮರ್ಪಣೆ!

ಏಪ್ರಿಲ್ ೨೯ರಿಂದ ಪ್ರಾರಂಭವಾದ ಗಂಜಿಯೂಟಕ್ಕೆ ಸಾಕಷ್ಟು ಖರ್ಚು ಇದೆ. ಅಡುಗೆಗೆ ಬೇಕಾಗುವ ಸಾಮಾಗ್ರಿ, ತರಕಾರಿ, ತೆಂಗಿನಕಾಯಿ, ಅಕ್ಕಿ, ಬೆಲ್ಲ ಎಲ್ಲದರ ಅವಶ್ಯಕತೆ ಇದೆ. ಇದನ್ನು ಪ್ರೆಸ್ ಕ್ಲಬ್ ಭರಿಸುತ್ತಿದ್ದರೆ ಕೆಲವು ಪತ್ರಕರ್ತರು ತಮ್ಮ ತಮ್ಮ ಮನೆಗಳಲ್ಲಿ ಬೆಳೆದ ತರಕಾರಿ, ತೆಂಗಿನಕಾಯಿ, ಅಕ್ಕಿ ಇತ್ಯಾದಿ ಕೊಟ್ಟು ನೆರವಾಗಿದ್ದಾರೆ. ಒಟ್ಟಾರೆ ಒಂದು ವಿನೂತನ ಮತ್ತು ಮಾದರಿ ಕಾರ್ಯಕ್ಕೆ ಪತ್ರಕರ್ತರು ಒಂದಾಗಿ ಬೆರೆತು ನೆರವಾಗುತ್ತಿರುವುದು ಮೆಚ್ಚತಕ್ಕ ವಿಷಯವಾಗಿದೆ.