ಪೆನ್‌ಡ್ರೈವ್ ಕಾಟಾಚಾರದ ತನಿಖೆ ಎಚ್‌ಡಿಕೆ ಕಿಡಿ

ಬೆಂಗಳೂರು, ಮೇ ೯- ಹಾಸನದ ಪೆನ್‌ಡ್ರೈವ್ ಪ್ರಕರಣದಲ್ಲಿ ಸತ್ಯಾಂಶ ಹೊರ ಬಂದು ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು ಸರ್ಕಾರಕ್ಕೆ ಬೇಕಾಗಿಲ್ಲ. ಪ್ರಚಾರಕ್ಕಾಗಿ ಕಾಟಾಚಾರದ ತನಿಖೆ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದರು.
ಜೆಡಿಎಸ್ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಐಟಿ ತನಿಖೆಯ ರೀತಿಯನ್ನು ಗಮನಿಸಿದರೆ ಇವರಿಗೆ ತಪ್ಪಿತಸ್ಥರನ್ನು ಪತ್ತೆಹಚ್ಚಿ ಶಿಕ್ಷೆ ಮಾಡುವುದು ಬೇಕಾಗಿಲ್ಲ. ಪ್ರಚಾರಕ್ಕಾಗಿ ಈ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಹರಿಹಾಯ್ದರು.
ಎಸ್‌ಐಟಿ ತನಿಖೆಯ ರೀತಿ ನಮಗೆ ಸಮಾಧಾನ ತಂದಿಲ್ಲ. ಈ ಬಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಕೊಡುತ್ತೇನೆ. ಇಂದು ಮಧ್ಯಾಹ್ನ ರಾಜಭವನಕ್ಕೆ ಹೋಗುತ್ತೇವೆ ಎಂದು ಅವರು ಹೇಳಿದರು.
ಮಾಜಿ ಸಚಿವ ಹೆಚ್.ಡಿ. ರೇವಣ್ಣನವರ ಮೇಲೆ ಹಾಕಲಾಗಿರುವ ಅಪಹರಣ ಪ್ರಕರಣದ ಹೆಣ್ಣುಮಗಳ ಹೇಳಿಕೆಯನ್ನು ಇದುವರೆಗೂ ಪಡೆದಿಲ್ಲ. ಈ ಹೆಣ್ಣುಮಕ್ಕಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿಲ್ಲ. ರೇವಣ್ಣನವರು ಅಪಹರಣ ಮಾಡಿದ್ದಾರೋ, ಇಲ್ಲವೋ ಎಂಬುದು ಸಾಬೀತಾಗಬೇಕು ಅಲ್ಲವೇ. ಆದರೆ ಹೆಣ್ಣು ಮಗಳಿಂದ ಹೇಳಿಕೆ ಕೊಡಿಸದೆ ರೇವಣ್ಣನವರು ಇನ್ನು ೩ ದಿನ ಜೈಲಿನಲ್ಲಿ ಇರಲಿ ಎನ್ನುವ ಹಠ ಇವರದ್ದು ಎಂದು ಅವರು ಕಿಡಿಕಾರಿದರು.
ಅಪಹರಣವಾಗಿರುವ ಹೆಣ್ಣುಮಗಳ ಕುಟುಂಬದ ಸದಸ್ಯರನ್ನು ಕುಮಾರಕೃಪ ಅತಿಥಿಗೃಹದಲ್ಲಿ ಇಟ್ಟಿದ್ದಾರೆ ಎಂಬ ಮಾಹಿತಿ ಇದೆ. ಇದುವರೆಗೂ ಹೆಣ್ಣು ಮಗಳ ಹೇಳಿಕೆಯನ್ನು ಎಸ್‌ಐಟಿ ಪಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು
ಪೆನ್‌ಡ್ರೈವ್ ಪ್ರಕರಣಕ್ಕೆ ನಾನೇ ನಿರ್ಮಾಪಕ, ನಾನೇ ನಿರ್ದೇಶಕ, ನಾನೇ ಕಥಾನಾಯಕ ಎಂದು ಮಹಾನಾಯಕರು ಹೇಳಿದ್ದಾರೆ. ಇವರು ರೆಡಿ ಮಾಡಿರುವ ಕಥೆಗೆ ಕಥಾನಾಯಕ ಬೇಕಲ್ಲ, ಅದಕ್ಕೆ ನನ್ನನ್ನು ಕಥಾನಾಯಕ ಮಾಡಿದ್ದಾರೆ. ಹಿಂದೆ ದೃಶ್ಯ ಎಂಬ ಒಂದು ಸಿನಿಮಾ ಬಂತಲ್ಲ ಆ ರೀತಿ ರೆಡಿ ಮಾಡಿರುವ ಕಥೆಗೆ ನನ್ನನ್ನು ಕಥಾನಾಯಕ, ನಿರ್ದೇಶಕ ಮಾಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದರು.