ಪೆನಾಲ್ಟಿಯಲ್ಲಿ ಎಡವಿದ ಲಾವೊಂಡಾಸ್ಕಿ: ಪೋಲೆಂಡ್‌-ಮೆಕ್ಸಿಕೋ ಪಂದ್ಯ ಡ್ರಾನಲ್ಲಿ ಅಂತ್ಯ

ದೋಹಾ (ಕತಾರ್‌), ನ.೨೨- ಇಲ್ಲಿನ ರಾಸ್‌ ಅಬೌ ಅಬೌದ್‌ ಸ್ಟೇಡಿಯಂನಲ್ಲಿ ನಡೆದ ಪೋಲೆಂಡ್‌ ಹಾಗೂ ಮೆಕ್ಸಿಕೋ ನಡುವಿನ ʻಸಿʼ ಗುಂಪಿನ ಪಂದ್ಯ ಗೋಲುರಹಿತ ನೀರಸ ಡ್ರಾನಲ್ಲಿ ಅಂತ್ಯಗೊಂಡಿದೆ. ಪೋಲೆಂಡ್‌ ನಾಯಕ ಲಾವೊಂಡಾಸ್ಕಿ ಪೆನಾಲ್ಟಿಯಲ್ಲಿ ವಿಫಲತೆ ಕಂಡಿದ್ದು, ಅಂತಿಮವಾಗಿ ತಂಡಕ್ಕೆ ದುಬಾರಿಯಾಯಿತು. ಈ ಮೂಲಕ ಅತ್ತ ಸೌದಿ ಅರೇಬಿಯಾ ವಿರುದ್ಧ ಸೋಲುಂಡಿರುವ ಅರ್ಜೆಂಟೀನಾಗೆ ಟೂರ್ನಿಯಲ್ಲಿ ಮುನ್ನಡೆಯುವ ಸಾಧ್ಯತೆಯನ್ನು ಹೆಚ್ಚಿಸಿದೆ.
ಪೋಲೆಂಡ್‌-ಮೆಕ್ಸಿಕೋ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದ್ದು, ಅರ್ಜೆಂಟೀನಾ ತಂಡಕ್ಕೆ ಕೊಂಚ ನೆಮ್ಮದಿ ತಂದಿದೆ. ಯಾಕೆಂದರೆ ಈಗಾಗಲೇ ಸೌದಿ ಅರೇಬಿಯಾ ವಿರುದ್ಧ ಆಘಾತಕಾರಿ ಸೋಲುಂಡಿರುವ ಅರ್ಜೆಂಟೀನಾಗೆ ಲೀಗ್‌ ಹಂತದಲ್ಲಿ ಎರಡು ಪಂದ್ಯಗಳು ಬಾಕಿ ಉಳಿದಿದೆ. ಪೋಲೆಂಡ್‌ ಹಾಗೂ ಮೆಕ್ಸಿಕೋ ವಿರುದ್ಧ ಅರ್ಜೆಂಟೀನಾ ಗೆಲುವು ಸಾಧಿಸಿದರೆ ಆಗ ಮುಂದಿನ ಸುತ್ತಿಗೇರುವುದು ಖಚಿತ. ಒಂದು ವೇಳೆ ಮೆಕ್ಸಿಕೋ ಹಾಗೂ ಪೋಲೆಂಡ್‌ ನಡುವೆ ಯಾರಾದರೂ ಗೆಲುವು ಸಾಧಿಸುತ್ತಿದ್ದರೆ ಅದು ಅರ್ಜೆಂಟೀನಾ ಮುಂದಿನ ಹಂತಕ್ಕೇರುವ ಸಾಧ್ಯತೆಗೆ ತೊಡುಕುಂಟು ಮಾಡುತಿತ್ತು. ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ ಲಾವೊಂಡಾಸ್ಕಿ, ವೆಗಾ ಮುಂತಾದ ಘಟಾನುಘಟಿ ಆಟಗಾರರನ್ನು ಹೊಂದಿರುವ ಪೋಲೆಂಡ್‌ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸ ಹೊಂದಿದ್ದರೂ ಅತ್ತ ಮೆಕ್ಸಿಕೋ ಕೂಡ ಬಲಿಷ್ಠ ತಂಡಗಳಲ್ಲಿ ಒಂದಾಗಿತ್ತು. ಈ ಹಿನ್ನೆಲೆಯಲ್ಲಿ ಪಂದ್ಯದಲ್ಲಿ ಸಹಜವಾಗಿಯೇ ಸಮಬಲದ ಹೋರಾಟ ನಿರೀಕ್ಷೆ ಮಾಡಲಾಗಿತ್ತು. ಅದರಂತೆ ಪಂದ್ಯದಲ್ಲಿ ಆರಂಭದಿಂದಲೇ ಎರಡೂ ತಂಡಗಳು ಹೋರಾಟಕಾರಿ ಆಟ ಪ್ರದರ್ಶಿಸಿದರೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಈ ನಡುವೆ ಮೆಕ್ಸಿಕೋ ನಾಲ್ಕು ಬಾರಿ ಟಾರ್ಗೆಟ್‌ಗೆ ಹೊಡೆದಿದ್ದರೂ ಗೋಲು ದಾಖಲಾಗಲಿಲ್ಲ. ಅತ್ತ ಪೋಲೆಂಡ್‌ ಕೂಡ ಎರಡು ಬಾರಿ ಟಾರ್ಗೆಟ್‌ಗೆ ಗುರಿ ಇಟ್ಟಿದ್ದರೂ ಸಫಲತೆ ಕಾಣಲಿಲ್ಲ. ಆದರೆ ಪಂದ್ಯದ ದ್ವಿತೀಯಾರ್ಧದ ೫೬ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿಯಲ್ಲಿ ಗೋಲು ಗಳಿಸಲು ಲಾವೊಂಡಾಸ್ಕಿ ವಿಫಲವಾಗಿದ್ದು, ಸಹಜವಾಗಿಯೇ ಪೋಲೆಂಡ್‌ಗೆ ಗೆಲ್ಲುವ ಸಾಧ್ಯತೆಗೆ ಹಾನಿ ಉಂಟು ಮಾಡಿತು. ಇನ್ನು ಅಂತಿಮವಾಗಿ ಪಂದ್ಯದಲ್ಲಿ ನಿಗದಿತ ೯೦ ನಿಮಿಷಗಳ ಅವಧಿ ಮುಕ್ತಾಯಗೊಂಡ, ೮ ನಿಮಿಷಗಳ ಹೆಚ್ಚುವರಿ ಅವಧಿ ನೀಡಿದರೂ ಇತ್ತಂಡಗಳಿಂದ ಗೋಲು ದಾಖಲಾಗಲಿಲ್ಲ. ಅಂತಿಮವಾಗಿ ಪಂದ್ಯ ಗೋಲುರಹಿತ ಡ್ರಾನಲ್ಲಿ ಅಂತ್ಯಗೊಂಡಿತು. ಈ ಮೂಲಕ ಎರಡೂ ತಂಡಗಳಿಗೂ ತಲಾ ಒಂದೊಂದು ಅಂಕ ನೀಡಲಾಗಿದೆ.