ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ವ್ಯಕ್ತಿ ಕೊಲೆ:ಆರೋಪಿಗಳ ಬಂಧನಕ್ಕೆ ಆಗ್ರಹ

ತುಮಕೂರು, ಆ. ೧೦- ಪಾವಗಡ ಪಟ್ಟಣದಲ್ಲಿ ದಲಿತ ಅಲೆಮಾರಿ ಸಮುದಾಯದ ವ್ಯಕ್ತಿಗೆ ಕ್ಷುಲ್ಲಕ ಕಾರಣಕ್ಕೆ ಕಿರುಕುಳ ನೀಡಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದಿರುವ ಕಿಡಿಗೇಡಿಗಳನ್ನು ಬಂಧಿಸಬೇಕು ಹಾಗೂ ಸಂತ್ರಸ್ಥ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಎಸ್ಸಿ, ಎಸ್ಟಿ ಅಲೆಮಾರಿ ವಿಮುಕ್ತ ಬುಡಕಟ್ಟು ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿರಣ್‌ಕುಮಾರ್ ಕೊತ್ತಗೆರೆ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ವಿಶೇಷ ಪ್ರಕರಣವೆಂದು ಪರಿಗಣಿಸಿ ಸಂತ್ರಸ್ಥ ಕುಟಂಬಕ್ಕೆ ೨೫ ಲಕ್ಷ ರೂ. ಪರಿಹಾರ ನೀಡುವುದರ ಜತೆಗೆ,ತಂದೆ ಇಲ್ಲದೆ ಆನಾಥರಾದ ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊರಬೇಕು. ಕರ್ತವ್ಯ ಲೋಪವೆಸಗಿದ ಪೊಲೀಸರನ್ನು ಸೇವೆಯಿಂದ ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದರು.
ಪಾವಗಡ ಪಟ್ಟಣದಲ್ಲಿ ಹೊಸ ಭೋವಿ ಪಾಳ್ಯದಲ್ಲಿ ಭೋವಿ ಸಮುದಾಯದ ಹೆಚ್ಚು ಮನೆಗಳಿದ್ದು, ಕೊರಚ ಜನಾಂಗದ ಕೆಲವೇ ಮನೆಗಳಿವೆ. ಹಲವಾರು ದಿನಗಳಿಂದ ಕೊರಮ ಜನಾಂಗಕ್ಕೆ ಸೇರಿದ ಶ್ರೀನಿವಾಸ್ ಎಂಬ ವ್ಯಕ್ತಿಗೆ ಅಲ್ಲಿನ ಭೋವಿ ಸಮುದಾಯದ ಕೆಲವರು ನಮ್ಮ ಮನೆಯ ಮುಂದೆ ಬೈಕಿನಲ್ಲಿ ಓಡಾಡಬೇಡ ಎಂದು ಕಿರುಕುಳ ನೀಡುತ್ತಿದ್ದು, ಜುಲೈ ೩೧ ರಂದು ಶ್ರೀನಿವಾಸ ತನ್ನ ಪತ್ನಿ ರತ್ನಮ್ಮಳ ಜತೆ ಮಾರುಕಟ್ಟೆಗೆ ಹೋಗುವ ಸಂದರ್ಭದಲ್ಲಿ ಜಗಳ ತೆಗೆದು ಕುಮಾರ್ ಬಿನ್ ರಾಮಣ್ಣ, ನಾರಾಯಣ ಬಿನ್ ಸಣ್ಣ ಅಂಜಿನಮ್ಮ,ರಾಮಾಂಜಿನಮ್ಮ ಬಿನ್ ರಾಮಣ್ಣ ಮತ್ತಿತರರು ಶ್ರೀನಿವಾಸ್ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಸಾರ್ವಜನಿಕವಾಗಿ ಕಪಾಳ ಮೋಕ್ಷ ಮಾಡಿದ್ದಾರೆ ಎಂದು ದೂರಿದರು.
ಅಲ್ಲದೆ ಆಗಸ್ಟ್ ೧ ಮತ್ತು ೨ ರಂದು ಪುನಃ ಶ್ರೀನಿವಾಸ್ ಕುಟುಂಬದ ಮೇಲೆ ಹಲ್ಲೆ ಮಾಡಿ, ಕೊಲೆಗೆ ಪ್ರಯತ್ನಿಸಿದ್ದಾರೆ. ಈ ಸಂಬಂಧ ಶ್ರೀನಿವಾಸ್ ಮತ್ತು ಪತ್ನಿ ರತ್ನಮ್ಮ ಪಾವಗಡ ಠಾಣೆಗೆ ದೂರು ನೀಡಿದ್ದರೂ ಪೊಲೀಸರು ಕ್ರಮ ಕೈಗೊಳ್ಳದ ಕಾರಣ, ಆ. ೫ ರಂದು ಶ್ರೀನಿವಾಸ್ ಮನೆಗೆ ನುಗ್ಗಿದ ದುಷ್ಕರ್ಮಿಗಳು ಕಬ್ಬಿಣದ ರಾಡು ಮತ್ತು ದೊಣ್ಣೆಗಳಿಂದ ಹಲ್ಲೆ ಮಾಡಿದಲ್ಲದೆ, ಮನೆಯ ಪಕ್ಕದಲ್ಲಿಯೇ ಇದ್ದ ಧನಲಕ್ಷ್ಮಿ ಮಿಲ್ ಹಿಂಭಾಗಕ್ಕೆ ಎಳೆದುಕೊಂಡು ಹೋಗಿ ಮನಬಂದಂತೆ ಥಳಿಸಿದ್ದು, ಇವರಿಂದ ತಪ್ಪಿಸಿಕೊಂಡು ಬಂದ ಮನೆಗೆ ಸೇರಿದ ಶ್ರೀನಿವಾಸನನ್ನು ಹೊರಗೆಳೆದು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಸುಟ್ಟಗಾಯಗಳಿಂದ ನರಳುತಿದ್ದ ಆತನನ್ನು ಪಾವಗಡ, ತುಮಕೂರು ಆಸ್ಪತ್ರೆಗೆ ದಾಖಲಿಸಿ, ನಂತರ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಸಂಬಂಧ ಮೃತನ ಪತ್ನಿ ದೂರು ನೀಡಿದ್ದರೂ ಯುಡಿಆರ್ ಮಾಡಿ ಕೈತೊಳೆದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿರುವ ಡಾ.ಜಿ.ಪರಮೇಶ್ವರ್ ಸಹ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಅವರ ತವರು ಜಿಲ್ಲೆಯಲ್ಲಿಯೇ ಈ ರೀತಿ ಬಲಾಢ್ಯ ಸಮುದಾಯಗಳು ಕೆಳ ಸಮುದಾಯದ ಜನರ ಮೇಲೆ ನಿರಂತರವಾಗಿ ಹಲ್ಲೆ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ರಾಜ್ಯದಲ್ಲಿ ಬಡವರಿಗೆ ರಕ್ಷಣೆ ಇಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದ್ದು, ಕೂಡಲೇ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸ್ಥಳಕ್ಕೆ ತೆರಳಿ ಸಂತ್ರಸ್ಥ ಕುಟುಂಬಕ್ಕೆ ಸಾಂತ್ವಾನ ಹೇಳಬೇಕು. ಯುಡಿಅರ್ ಎಂದು ರಿಜಿಸ್ಟ್ ಆಗಿರುವ ಪ್ರಕರಣವನ್ನು ೩೦೨ ಕೊಲೆ ಪ್ರಕರಣವಾಗಿ ಪರಿವರ್ತಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ. ಈ ಸಂಬಂಧ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ ಎಂದರು.
ಅಖಿಲ ಕರ್ನಾಟಕ ಕುಳುವ ಮಹಾಸಭಾದ ಜಿಲ್ಲಾಧ್ಯಕ್ಷ ಲೋಕೇಶಸ್ವಾಮಿ ಮಾತನಾಡಿ, ಪಾವಗಡದಲ್ಲಿ ಬಲಾಢ್ಯ ಭೋವಿ ಸಮುದಾಯದ ಬಲಹೀನ ಕೋರಮ ಸಮುದಾಯದ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವುದು ದುರ್ದೈವದ ಸಂಗತಿ. ಕೂಡಲೇ ಜಿಲ್ಲಾಡಳಿತ ಆರೋಪಿಗಳನ್ನು ಬಂಧಿಸಬೇಕು. ಇಡೀ ಪ್ರಕರಣದಲ್ಲಿ ಪೊಲೀಸರ ಕರ್ತವ್ಯ ಲೋಪ ಎದ್ದು ಕಾಣುತ್ತಿದ್ದು, ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದಂತೆ ಸಿಬ್ಬಂದಿಗಳನ್ನು ಅಮಾನತ್ತು ಮಾಡಬೇಕು. ಇಲ್ಲದಿದ್ದಲ್ಲಿ ರಾಜ್ಯಾಧ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಕುಳುವ ಮಹಾಸಭಾದ ರಾಜ್ಯ ಉಪಾಧ್ಯಕ್ಷೆ ಭೀಮಪುತ್ರಿ ನಾಗಮ್ಮ, ಜಿಲ್ಲಾ ಗೌರವಾಧ್ಯಕ್ಷ ಮಹದೇವಯ್ಯ, ತುರುವೇಕೆರೆ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್, ಪಾವಗಡ ತಾಲ್ಲೂಕು ಮುಖಂಡ ಪಾಂಡಪ್ಪ, ಸಿಳ್ಳೆಕ್ಯಾತಾಸ್ ಮುಖಂಡ ದಯಾನಂದ್, ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದ ಕೇಶವ ಅಮಲಾಪುರ, ಗುಬ್ಬಿ ಮುಖಂಡರಾದ ಚಲುವರಾಜ್, ಹಂದನಕೆರೆ ಗಿರೀಶ್ ಉಪಸ್ಥಿತರಿದ್ದರು.