ಪೆಟ್ರೋಲ್ ಬೆಲೆ ನಿರಂತರ ಏರಿಕೆ: ಕೇಂದ್ರದ ವೈಫಲ್ಯ: ಡಿಕೆಶಿ ವಾಗ್ದಾಳಿ

ಬೆಂಗಳೂರು, ಜೂ.5- ಕಳೆದ ‘ಜನವರಿಯಿಂದ ಇಲ್ಲಿಯ ತನಕ ಪೆಟ್ರೋಲ್ ದರ 43 ಬಾರಿ ಏರಿಕೆಯಾಗಿದೆ. ಇದು ದೇಶದ ಆರ್ಥಿಕ ಮತ್ತು ಆಡಳಿತಾತ್ಮಕ ರಂಗಗಳಲ್ಲಿ ಸರ್ಕಾರದ ಅಸಮರ್ಥತೆ ಎತ್ತಿ ತೋರಿಸುತ್ತದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ

ದೇಶದ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ರೂ ಅಡುಗೆ ಎಣ್ಣೆ ಬೆಲೆ ಲೀಟರ್ 220 ರೂ ತಲುಪಿದೆ ಎಂದು ಆರೋಪಿಸಿದರು.

ರಾಮನಗರ ಜಿಲ್ಲೆಯ ಕೂಟಗಲ್ ಹೋಬಳಿಯ ಜಾಲಮಂಗಲ ಗ್ರಾಮದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಡವರಿಗೆ ಆಹಾರ ಮತ್ತು ತರಕಾರಿ ಕಿಟ್‌ಗಳನ್ನು ವಿತರಿಸಿ ಮಾತನಾಡಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕೇಂದ್ರದ ಬಿಜೆಪಿ ಸರ್ಕಾರ ಜನವರಿಯಲ್ಲಿ 10 ಬಾರಿ, ಫೆಬ್ರವರಿಯಲ್ಲಿ 16 ಬಾರಿ, ಮೇ ತಿಂಗಳಲ್ಲಿ 16 ಬಾರಿ ಮತ್ತು ಜೂನ್ ಮೊದಲ ವಾರದಲ್ಲಿ ಒಮ್ಮೆ ಪೆಟ್ರೋಲ್ ದರವನ್ನು ಹೆಚ್ಚಿಸಿದೆ. ಅದು ಜನಸಾಮಾನ್ಯರಿಗೆ ಪೆಟ್ರೋಲ್ ಕೈಗೆಟುಕದಂತೆ ಮಾಡಲು ನಿರ್ಧರಿಸಿದೆ. ನಾವೆಲ್ಲರೂ ಪೆಟ್ರೋಲ್ ಪಂಪ್‌ಗಳ ಮುಂದೆ ಪ್ರತಿಭಟನೆ ಮಾಡೋಣ‌ ಎಂದರು

ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಬಿಜೆಪಿ ಇಂಧನ ಬೆಲೆ ಹೆಚ್ಚಿಸಿಲ್ಲ ಈಗ ದರ ಏರಿಕೆಯಾಗಿದೆ ಎಂದು ಹೇಳಿದರು

ಲಸಿಕೆ‌ನೀಡಿಕೆ ವೈಫಲ್ಯ:

ಲಸಿಕೆ ಅಭಿಯಾನ ಆರಂಭವಾಗಿ 5 ತಿಂಗಳಾದರೂ ಕೇವಲ ಶೇ.3.17 ರಷ್ಟು ಭಾರತೀಯರು ಮಾತ್ರ ಕೋವಿಡ್ ಲಸಿಕೆ ಪಡೆದಿದ್ದಾರೆ. ಇದು ಕೂಡ ಸರ್ಕಾರದ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆ ಎಂದರು.

ಜಾತಿ ಮತ್ತು ಧರ್ಮಗಳನ್ನು ಲೆಕ್ಕ ಹಾಕದೆ ಎಲ್ಲಾ ಜನರಿಗೆ ಕಾಂಗ್ರೆಸ್ ಉಚಿತ ಲಸಿಕೆ ನೀಡುತ್ತಿದೆ. ನಿನ್ನೆಯಷ್ಟೇ ನಾನು 3 ಲಕ್ಷ ಜನರಿಗೆ ಉಚಿತ ಲಸಿಕೆ ಹಾಕುವ ಅಭಿಯಾನವನ್ನು ದಾವಣಗೆರೆಯಲ್ಲಿ ಪ್ರಾರಂಭಿಸಿದೆ. ಆದರೆ ಮತ್ತೊಂದೆಡೆ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪ್ರತಿ ಲಸಿಕೆಗೆ ₹900 ದರ ನಿಗದಿ ಪಡಿಸಿದ್ದಾರೆ. ಇದು ಬಿಜೆಪಿ ಸರ್ಕಾರಕ್ಕಿರುವ ಸಾರ್ವಜನಿಕರ ಮೇಲಿನ ಉದಾಸೀನತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು

ಬಿಜೆಪಿ ಸರ್ಕಾರವು ಕಾಂಗ್ರೆಸ್ ನ ವ್ಯಾಕ್ಸಿನೇಷನ್ ಯೋಜನೆಗೆ ಅನುಮತಿ ನೀಡಿದರೆ, ಇಡೀ ರಾಜ್ಯಾದ್ಯಂತ ಉಚಿತ ಲಸಿಕೆ ಹಾಕುವ 100ರೂಪಾಯಿ ಕೋಟಿ ಯೋಜನೆ ಜಾರಿಗೆ ತಯಾರಿದ್ದೇವೆ ಎಂದರು.

ಸಾಂಕ್ರಾಮಿಕ ರೋಗದ ಸಮಯದಲ್ಲಿ ಜನರಿಗೆ ಸಹಾಯ ಮಾಡಲು ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಹೆಚ್ಚಿನ ಸಮಯ ಕೆಲಸ ಮಾಡುತ್ತಿದ್ದಾರೆ. ಮಾಜಿ ಸಚಿವ ಶಾಮನೂರ್ ಶಿವಶಂಕರಪ್ಪ ಅವರು ತಮ್ಮ ಕ್ಷೇತ್ರ ದಾವಣಗೆರೆಯಲ್ಲಿ ಶುಕ್ರವಾರ ಲಸಿಕೆ ಕಾರ್ಯಕ್ರಮ ಪ್ರಾರಂಭಿಸಿದರು. ವ್ಯಾಕ್ಸಿನೇಷನ್ ಡ್ರೈವ್ ಅನ್ನು ರಾಜ್ಯದ ಇತರ ಭಾಗಗಳಲ್ಲಿ ಜೂನ್ ತಿಂಗಳಲ್ಲಿ ವಿಸ್ತರಿಸಲು ಕಾಂಗ್ರೆಸ್ ಪಕ್ಷ ಯೋಜಿಸಿದೆ ಎಂದು ಹೇಳಿದರು.

6.6 ಕೋಟಿ ಲಸಿಕೆಗಳನ್ನು ರಫ್ತು ಮಾಡುವ ಮೂಲಕ ಸರ್ಕಾರ ತನ್ನದೇ ಜನರ ಆರೋಗ್ಯ ಮತ್ತು ಜೀವನದೊಂದಿಗೆ ರಾಜಿ ಮಾಡಿಕೊಂಡಿದೆ ಮತ್ತು ಆ ಮೂಲಕ ದೇಶದಲ್ಲಿ ಮರಣ ಪ್ರಮಾಣವನ್ನು ಹೆಚ್ಚಿಸಿದೆ ಎಂದು ಹೇಳಿದರು.