ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಿಂದ ೧೦೦ ನಾಟೌಟ್ ಪ್ರತಿಭಟನೆ

ರಾಯಚೂರು, ಜೂ.೧೧- ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸೂಚನೆಯ ಮೇರೆಗೆ ರಾಯಚೂರು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಇಂದು ಇತ್ತೀಚೆಗೆ ಕೇಂದ್ರ ಸರ್ಕಾರವು ಹೆಚ್ಚಿಸಿದ ಪೆಟ್ರೋಲ್ ಹಾಗೂ ಡಿಸೇಲ್ ದರ ಏರಿಕೆ ಖಂಡಿಸಿ “೧೦೦ ನಾಟೌಟ್” ಎಂಬ ಘೋಷ ವಾಕ್ಯದಡಿ ಪ್ರತಿಭಟನೆ ನಡೆಸಿದರು.
ನಗರದ ಗೋವಿಂದರಾವ್ ಪೆಟ್ರೋಲ್ ಬಂಕ್ ಮುಂದುಗಡೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕರ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಲಾಯಿತು.
ಕೆಲಕಾಲ ವಾಹನ ಸಂಚಾರಕ್ಕೆ ಸಮಸ್ಯೆಯಾಯಿತು. ಪ್ರತಿಭಟನಾನಿರತ ಮುಖಂಡರು ’ಪೆಟ್ರೋಲ್ ೧೦೦ ನಾಟ್ ಔಟ್ ದೇಶದ ಜನತೆ ಸ್ಟಂಪ್ ಔಟ್’ ಬಿತ್ತಿಪತ್ರ ಪ್ರದರ್ಶಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಎಐಸಿಸಿ ಪ್ರಧಾನಕಾರ್ಯದರ್ಶಿ ಎನ್.ಬೋಸರಾಜು ಮಾತನಾಡಿ, ಕೇಂದ್ರ ಸರ್ಕಾರ ಚುನಾವಣೆಗೂ ಮುನ್ನ ನೀಡಿದ ಆಶ್ವಾಸನೆಯಂತೆ ಕೆಲಸ ಮಾಡದೇ ಯುವಕರ, ರೈತರ ಜನ ಸಾಮಾನ್ಯರ ವಿರೋಧಿ ನೀತಿ ಅನುಸರಿಸುತ್ತಿದೆ. ಪೆಟ್ರೋಲ್ ದರ ೧೦೦ಗೆ ಏರಿಕೆಯಾಗಿದ್ದು ಎಐಸಿಸಿ ನಿರ್ದೇಶನದ ಮೇರೆಗೆ ರಾಜ್ಯದ ೫ ಸಾವಿರ ಪೆಟ್ರೋಲ್ ಬಂಕ್ ಬಳಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ಮಾಡುತಿದ್ದು ಜೂನ್ ೧೧ರಿಂದ ೧೫ ರ ವರೆಗೆ ವಿವಿಧೆಡೆ ಬ್ಲಾಕ್ ಕಾಂಗ್ರೆಸ್, ಮಹಿಳಾ ಮೋರ್ಚಾ, ಹೋಬಳಿ ಮಟ್ಟದಲ್ಲಿಯೂ ಪ್ರತಿಭಟನೆ ಮಾಡಲಾಗುವುದು.ಪೆಟ್ರೋಲ್ ದರವಲ್ಲದೇ ವಿದ್ಯುತ್ ದರ ೩೦ಪೈಸೆ ಹೆಚ್ಚು ಮಾಡಿದ್ದು ಖಂಡನೀಯ ಇದರಿಂದ ಜನ ಸಾಮಾನ್ಯರಿಗೆ, ಮಧ್ಯಮ ವರ್ಗಕ್ಕೆ ಜೀವನ ನಡೆಸಲು ತೀವ್ರ ಸಮಸ್ಯೆಯಾಗಿದೆ ಎಂದು ದೂರಿದರು.
ಈ ಪ್ರತಿಭಟನೆಯಲ್ಲಿ ಶಾಸಕರುಗಳಾದ ಬಸನಗೌಡ ದದ್ದಲ, ಬಸನಗೌಡ ತುರ್ವಿಹಾಳ, ಡಿ.ಎಸ್.ಹುಲಗೇರಿ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಪಾಟೀಲ್ ಇಟಗಿ, ಕೆಪಿಸಿಸಿ ವಕ್ತಾರರಾದ ಎ.ವಸಂತಕುಮಾರ, ಜಿ.ಬಸವರಾಜರೆಡ್ಡಿ, ಕೆ.ಶಾಂತಪ್ಪ, ಅಮರೇಗೌಡ ಹಂಚಿನಾಳ, ಜಿ.ಶಿವಮೂರ್ತಿ, ರಾಮಣ್ಣ ಇರಬಗೇರಾ, ಶರಣಪ್ಪ ಮೇಟಿ, ರುದ್ರಪ್ಪ ಅಂಗಡಿ, ಆಂಜನೇಯ ಕುರುಬದೊಡ್ಡಿ, ಸುಧೀಂದ್ರ ಜಾಗೀರದಾರ, ಮಲ್ಲಿಕಾರ್ಜುನ ಪಾಟೀಲ್, ಸುಧಾಮ, ಪವನ ಪಾಟೀಲ್, ಜಿ.ಸುರೇಶ, ಅಸ್ಲಂ ಪಾಷಾ, ಈಶಪ್ಪ, ಅರುಣ ಕುಮಾರ, ರಾಮಕೃಷ್ಣ ನಾಯಕ, ಕಡಗೋಳ ಚೇತನ, ಸಿದ್ದಯ್ಯಸ್ವಾಮಿ ಯರಮರಸ್, ಶ್ರೀನಿವಾಸ, ದಸ್ತಗಿರಿ, ಎಸ್.ರವೀಂದ್ರನಾಥ, ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ನಂತರ ಕೋರ್ಟ್ ಮುಂದುಗಡೆ ಇರುವ ಪೆಟ್ರೋಲ್ ಬಂಕ್‌ನಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ನಿರ್ಮಲಾ ಬೆಣ್ಣಿ ಅವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.
ರಾಮಮಂದಿರದ ಹತ್ತಿರ ಇರುವ ಪೆಟ್ರೋಲ್ ಬಂಕ್‌ನ ಮುಂದುಗಡೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಅರುಣ ದೋತರಬಂಡಿ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.
ಕೃಷಿ ಮಹಾವಿದ್ಯಾಲಯದ ಎದುರುಗಡೆ ಇರುವ ಪೆಟ್ರೋಲ್ ಬಂಕ್‌ನಲ್ಲಿ ಜಿಲ್ಲಾ ಪರಿಶಿಷ್ಟ ಪಂಗಡದ ಅಧ್ಯಕ್ಷರಾದ ನರಸಿಂಹ ನಾಯಕರ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.
ಆರ್.ಟಿ.ಓ. ವೃತ್ತದಲ್ಲಿರುವ ಪೆಟ್ರೋಲ್ ಬಂಕ್‌ನ ಮುಂದುಗಡೆ ಜಿಲ್ಲಾ ಎನ್.ಎಸ್.ಯು.ಐ. ಅಧ್ಯಕ್ಷರಾದ ಸೈಯದ್ ಮುದಾಸಿರ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.
ಗಂಜ್ ವೃತ್ತದಲ್ಲಿರುವ ಪೆಟ್ರೋಲ್ ಬಂಕ್‌ನ ಮುಂದುಗಡೆ ಜಿಲ್ಲಾ ಕಾಂಗ್ರೆಸ್‌ನ ಕಿಸಾನ್ ಸೆಲ್‌ನ ಅಧ್ಯಕ್ಷರಾದ ರಮೇಶ ಯಾದವ್‌ರ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದರು.