ಪೆಟ್ರೋಲ್ ಬೆಲೆ ಏರಿಕೆ ಕಾಂಗ್ರೆಸ್ ಟೀಕೆ

ಬಳ್ಳಾರಿ, ಜೂ.08: ರಾಜ್ಯದಲ್ಲಿ ಈಗ ಪೆಟ್ರೋಲ್ ಬೆಲೆ 100 ರೂ.ನ ಗಡಿದಾಟಿದೆ. ಮೊದಲೇ ಕೊರೊನಾ ಸಂಕಷ್ಟದಲ್ಲಿದ್ದ ದೇಶದ ಜನರಿಗೆ ಇದು ಗಾಯದ ಮೇಲೆ ಬರೆ ಎಳೆಸಿಕೊಂಡ ಅನುಭವ ಆಗುತ್ತಿದೆ. ತೈಲ ಬೆಲೆಯನ್ನು ನಿಯಂತ್ರಿಸುವಲ್ಲಿ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ವಿಫಲವಾಗಿದೆಂದು ಕಾಂಗ್ರೆಸ್ ಮುಖಂಡ ವೆಂಕಟೇಶ್ ಹೆಗಡೆ ಟೀಕಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಇದೀಗ ಕೃಷಿ ಚಟುವಟಿಕೆ ಗರಿಗೆದರಿವೆ. ಟ್ರ್ಯಾಕ್ಟರ್, ಬೈಕ್ ಮುಂತಾದ ವಾಹನಗಳ ಬಳಕೆ ಹೆಚ್ಚಾಗುವ ಸಂದರ್ಭ ಇದು. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸದೇ ಇರುವುದು ದುರದ್ದೇಶದಿಂದ ಕೂಡಿದೆ. ಜನರನ್ನು ಸಂಕಷ್ಟಕ್ಕೆ ತಳ್ಳುವುದೇ ಸರ್ಕಾರರದ ಉದ್ದೇಶವೇನೋ ಎಂಬಂತೆ ಇದೆ.
ಇನ್ನು ಸದ್ಯ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹುತೇಕ ಈ ತಿಂಗಳ ಪೂರ್ತಿ ಕಚ್ಚಾ ತೈಲದ ಬೆಲೆ ಸ್ಥಿರವಾಗಿದೆ. ಸಣ್ಣ ಪ್ರಮಾಣದ ಬೆಲೆ ಏರಿಕೆ ಆಗಾಗ ಇದ್ದರೂ ಸಹ ದೊಡ್ಡಮಟ್ಟದ ಏರಿಕೆ ಕಂಡಿಲ್ಲ. ಆದರೂ ಕೇಂದ್ರ ಸರ್ಕಾರ ಬೆಲೆ ಏರಿಕೆಗೆ ಕಡಿವಾಣ ಹಾಕದೇ ತಣ್ಣಗಿರುವುದು ಅವರಿಗೆ ಇರುವ ಜನಪರ ಕಾಳಜಿ ಎಂತಹುದ್ದು ಎಂಬುದನ್ನು ತೋರಿಸುತ್ತದೆ.
ಅಕ್ಕಪಕ್ಕದ ದೇಶಗಳಲ್ಲಿ ಡೀಸೆಲ್, ಪೆಟ್ರೋಲ್ ಬೆಲೆ 50-60 ರೂ.ನ ಆಸುಪಾಸಿನಲ್ಲಿದೆ. ನೆರೆಯ ಬಾಂಗ್ಲಾ ದೇಶದಲ್ಲಿ 76 ರೂ. ಇದೆ. ಚೀನಾದಲ್ಲಿ 80 ರೂ. ಇದೆ. ಆದರೆ, ನಮ್ಮ ದೇಶದಲ್ಲಿ ಮಾತ್ರ 100ರ ಗಡಿದಾಟಿದೆ. ಇನ್ನೂ ಹೆಚ್ಚಿನ ಹೊರೆ ಬೀಳಲುಬಹುದು.
ಸದ್ಯ ದೇಶದ ಆರ್ಥಿಕತೆ ಮೇಲೆ ಸರಿಯಾದ ಹಿಡಿತ ಹೊಂದಿರದ ಕೇಂದ್ರ ಸರ್ಕಾರದ ನಿಲುವಿನಿಂದ ಡಾಲರ್ ಬೆಲೆ ಈಗ 73 ರೂ.ಗೆ ತಲುಪಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ಸಣ್ಣ ಪ್ರಮಾಣದಲ್ಲಿ ಏರುಪೇರಾದರೂ ಸಹ ದೊಡ್ಡ ಪ್ರಮಾಣದ ಹೊಡೆತ ನಮ್ಮ ಮೇಲೆ ಬೀಳುತ್ತದೆ. ಈ ಹಿಂದೆ ಅಧಿಕಾರ ಹಿಡಿಯುವಾಗ ಬಿಜೆಪಿ ನಾಯಕರು ಐದೇ ವರ್ಷದಲ್ಲಿ ಡಾಲರ್ ಬೆಲೆಯನ್ನು ಒಂದು ರೂ.ಗೆ ಇಳಿಯುವಂತೆ ಮಾಡುವುದಾಗಿ ಭಾಷಣ ಬಿಗಿದಿದ್ದರು. ಸದ್ಯದ ಸ್ಥಿತಿ ನೋಡಿದರೆ ಡಾಲರ್ ಬೆಲೆ ಸಹ 100 ಗಡಿ ತಲುಪುವುದೇನೋ ಎಂಬ ಅನುಮಾನ ಹುಟ್ಟಿಕೊಳ್ಳುತ್ತಿದೆ.
ಬಿಜೆಪಿ ನಾಯಕರು, ಕಾರ್ಯಕರ್ತರು ಬೆಲೆ ಏರಿಕೆ ವಿಷಯ ಸೇರಿದಂತೆ ಎಲ್ಲಾ ವಿಚಾರಗಳಿಗೆ ಪ್ರತೀ ಬಾರಿ ಈ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರವನ್ನು ಟೀಕೆಮಾಡುವ ಖಯಾಲಿ ಹೊಂದಿದ್ದಾರೆ. ಆದರೆ, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಕಚ್ಚಾ ತೈಲದ ಬೆಲೆ ಏರಿಕೆ ಕಂಡರೂ ಸಹ ಇಂಧನದ ಬೆಲೆ ನಿಯಂತ್ರಣದಲ್ಲಿರಿಸಲು ಶ್ರಮಿಸಿದೆ.
ಬಿಜೆಪಿಗರು ಪದೇ ಪದೇ ಈ ಹಿಂದೆ ಇದ್ದ ಸರ್ಕಾರ ಹಾಗೆ ಮಾಡಿತು, ಹೀಗೆ ಮಾಡಿತು ಎನ್ನುವ ಬದಲು ಸದ್ಯ ಸಂಕಷ್ಟದಲ್ಲಿರುವ ಜನರ ನೆರವಿಗೆ ಬರಬೇಕೆಂದು ಕೋರಿದ್ದಾರೆ.