ಪೆಟ್ರೋಲ್ ಬಂಕ್, ಆಭರಣ ಅಂಗಡಿ ಮಾಲೀಕರೊಂದಿಗೆ ಸಭೆ


ಬಳ್ಳಾರಿ,ಮಾ.27 : ಮುಂಬರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಸಂಬಂಧ ಮತದಾರರನ್ನು ಸೆಳೆಯಲು ಆಭರಣ, ಇತರೆ ಉಡುಗೊರೆ ನೀಡುತ್ತಿದ್ದಲ್ಲಿ ಮತ್ತು ಯಾವುದೇ ಅಹಿತಕರ ಚಟುವಟಿಕೆಗಳು ನಡೆಯದಂತೆ ಪೆಟ್ರೋಲ್ ಬಂಕ್ ಹಾಗೂ ಆಭರಣ ಅಂಗಡಿ ಮಾಲೀಕರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ ಅವರು ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಗರದ ಪೆಟ್ರೋಲ್ ಬಂಕ್ ಮಾಲೀಕರು ಹಾಗೂ ಆಭರಣ ಅಂಗಡಿಗಳ ಮಾಲೀಕರೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2023 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯನ್ನು ಕಟ್ಟು ನಿಟ್ಟಾಗಿ ಹಾಗೂ ಶಾಂತಿಯುತವಾಗಿ ನಡೆಸಲು ಜಿಲ್ಲಾಡಳಿತವು ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ.
ಚುನಾವಣೆ ಪ್ರಚಾರ ಕಾರ್ಯದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಅನಧೀಕೃತವಾಗಿ ಬಳಸದಂತೆ ಹಾಗೂ ಪೆಟ್ರೋಲ್ ಬಂಕ್ ಮಾಲೀಕರು ಅತೀ ಹೆಚ್ಚು ಇಂಧನ ಆಮದು ಮಾಡಿಕೊಳ್ಳುವಂತಿಲ್ಲ. ಒಂದು ವೇಳೆ ಮಾಡಿಕೊಂಡಲ್ಲಿ ಹಿಂದಿನ ಮೂರು ತಿಂಗಳ ಸರಬರಾಜು ಕುರಿತು ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಆಕರ್ಷಕ ಆಭರಣಗಳನ್ನು (ನಾಣ್ಯದ ರೂಪದ) ಮತ್ತು ಉಡುಗೊರೆಗಳ ಮೂಲಕ ಮತದಾರರನ್ನು ಸೆಳೆಯಲು ಬಳಸಿಕೊಳ್ಳಲಾಗುತ್ತಿದೆ. ಆಭರಣ ಅಂಗಡಿಗಳ ಮಾಲೀಕರು ಯಾವುದೇ ರೀತಿಯ ಅಸ್ಪದ ನೀಡಬಾರದು ಎಂದರು.
ಒಂದೇ ಸಮಯದಲ್ಲಿ ಅತೀ ಹೆಚ್ಚು ಆಭರಣಗಳನ್ನು ಖರೀದಿಸಿದರೆ ಅಂತಹವರ ಮಾಹಿತಿ ಅಂಗಡಿಗಳ ಮಾಲೀಕರು ದಾಖಲಿಸಿಕೊಳ್ಳಬೇಕು. ದಾಖಲೆಗಳಿಲ್ಲದ ಆಭರಣ ಮತ್ತು ಇತರೆ ಉಡುಗೊರೆಗಳನ್ನು ಸಂಚರಿಸುವ ಸಮಯದಲ್ಲಿ ಜಪ್ತಿ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನಗರದ ಎಲ್ಲಾ ಪೆಟ್ರೋಲ್ ಬಂಕ್ ಮಾಲೀಕರು ಹಾಗೂ ಆಭರಣ ಅಂಗಡಿಗಳ ಮಾಲೀಕರು, ಚುನಾವಣಾ ಸಿಬ್ಬಂದಿಗಳು ಹಾಗೂ ಇತರರು ಇದ್ದರು.