ಪೆಟ್ರೋಲ್, ಡೀಸೆಲ್ ಬೆಲೆ ಕಡಿತಕ್ಕೆ ಚಿಂತನೆ

ನವದೆಹಲಿ, ಡಿ.೨೯- ಲೋಕಸಭೆ ಚುನಾವಣೆಗೂ ಮೊದಲು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿತದ ಕುರಿತು ಪ್ರಧಾನಿ ನರೇಂದ್ರ ಮೋದಿ ಚಿಂತಿಸಿದ್ದು, ಪ್ರತಿ ಲೀಟರ್‌ಗೆ ೧೦ ರೂ. ಇಳಿಕೆಯಾಗಬಹುದು ಎಂದು ಹೇಳಲಾಗುತ್ತಿದೆ.
ಪೆಟ್ರೋಲಿಯಂ ಸಚಿವಾಲಯವು ಗುರುವಾರ ಪ್ರಧಾನಿ ಮೋದಿಯವರ ಅನುಮೋದನೆಗಾಗಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್‌ನಲ್ಲಿ ೮ ರಿಂದ ೧೦ ರೂಪಾಯಿಗಳವರೆಗಿನ ಕಡಿತವನ್ನು ಒಳಗೊಂಡ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ.
ಪೆಟ್ರೋಲ್ ಮತ್ತು ಡೀಸೆಲ್ ಎರಡರಲ್ಲೂ ೧೦ ಇಳಿಕೆಯಾಗಬಹುದು. ಎರಡೂ ಇಂಧನಗಳ ಮೇಲಿನ ಕೇಂದ್ರೀಯ ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಮೂಲಕ ಕ್ರಮವಾಗಿ ೮ ಮತ್ತು ೬ ರೂಪಾಯಿರಷ್ಟು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕಡಿಮೆ ಮಾಡಲು ಕೇಂದ್ರವು ನಿರ್ಧರಿಸಿದೆ. ಸುಮಾರು ಎರಡು ವರ್ಷಗಳ ನಂತರ ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ.
ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿಯುತ್ತಿದ್ದು, ಭಾರತದಲ್ಲಿ ಇಂಧನ ವೆಚ್ಚವನ್ನು ಕಡಿಮೆ ಮಾಡುವಾಗ ಇದನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.