ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಗೆ ಕನ್ನಡ ಭೂಮಿ ಖಂಡನೆ

ಕಲಬುರಗಿ,ಜೂ.10-ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಸದ್ದಿಲ್ಲದೆ ಏರಿಕೆ ಮಾಡಿದೆ. ಇದರಿಂದ ಜನಸಾಮಾನ್ಯರ ಮೇಲೆ ಹೊರೆಯಾಗಲಿದೆ. ಕೂಡಲೇ ಬೆಲೆ ಏರಿಕೆಯನ್ನು ಹಿಂಪಡೆಯಬೇಕು ಹಾಗೂ ಪೆಟ್ರೋಲ್ ಮತ್ತು ಡೀಸೆಲ್ ಜಿಎಸ್ ಟಿ ವ್ಯಾಪ್ತಿಗೆ ಸೇರಿಸಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಆಗ್ರಹಿಸಿದ್ದಾರೆ.
ಈಗಾಗಲೇ ಸಾರ್ವಜನಿಕರು ಲಾಕ್ ಡೌನ್ ಜಾರಿಯಿಂದ ಕೆಲಸವಿಲ್ಲದೆ ಆರ್ಥಿಕವಾಗಿ ಜರ್ಜರಿತರಾಗಿದ್ದಾರೆ. ದರ ಏರಿಕೆ ಇಂದ ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ. ತೈಲ ಬೆಲೆ ಏರಿಕೆ ಮಾಡಿ ಕೇಂದ್ರ ಸರ್ಕಾರ ಜನರನ್ನು ಲೂಟಿ ಮಾಡಲು ಹೊರಟಿದೆ. ಕಳೆದ 4 ವರ್ಷದಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಕಂಡಿದ್ದು ಲೀಟರ್ ಪೆಟ್ರೋಲ್ ಗೆ ನೂರು ರೂಪಾಯಿ ಇದ್ದರೆ ಡಿಸೇಲ್ ಬೆಲೆ ಕೂಡ ನೂರರ ಆಸುಪಾಸಿನಲ್ಲಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬ್ಯಾರೆಲ್ ಬೆಲೆ ಕಡಿಮೆ ಇದ್ದರೂ ರಿಟೇಲ್ ಮಾರಾಟ ದರ ಮಾತ್ರ ಗಗನಕ್ಕೇರುತ್ತಿದೆ. ಇದರಿಂದ ಜನಸಾಮಾನ್ಯರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಬೈಕ್ ಹಾಗೂ ಕಾರುಗಳನ್ನು ರಸ್ತೆಗಿಳಿಸುವುದು ದುಸ್ತರವಾಗಿದೆ. ಡಿಸೇಲ್ ದರ ಏರಿಕೆಯಿಂದ ಸರಕು ವಾಹನಗಳ ಬಾಡಿಗೆ ಹೆಚ್ಚಾಗಿದೆ. ಪರಿಣಾಮ ದಿನಬಳಕೆಯ ಅಗತ್ಯ ವಸ್ತುಗಳ ದರವೂ ದುಪ್ಪಟ್ಟಾಗಿದೆ. ಕೆಲಸಕ್ಕೆ ತೆರಳುವ ಲಕ್ಷಾಂತರ ಜನರು ವಾಹನಗಳನ್ನೇ ಅವಲಂಭಿಸಿದ್ದಾರೆ. ತಮ್ಮ ವಾಹನಗಳಿಗೆ ದುಬಾರಿ ಪೆಟ್ರೋಲ್ ಹಾಕಿಸಲು ಪರದಾಡುವಂತಾಗಿದೆ. ದಿನ ನಿತ್ಯ ಓಡಾಡುವವರಿಗೆ‌ ಸಂಕಷ್ಟ ಎದುರಾಗಿ ಜೇಬಿಗೆ ಕತ್ತರಿ ಬೀಳುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಜಿಎಸ್ ಟಿ ವ್ಯಾಪ್ತಿಗೆ ಸೇರಿಸಿದರೆ ದರ ಕಡಿಮೆಯಾಗುತ್ತದೆ. ಈ ಹಿಂದೆ ಕೇಂದ್ರ ಸರ್ಕಾರ ಇದರ ಕುರಿತು ಚಿಂತನೆ ನಡೆಸಿ ನಂತರ ಕೈಬಿಟ್ಟಿತು. ಪೆಟ್ರೋಲ್ ಮತ್ತು ಡೀಸೆಲ್ ಜಿಎಸ್ ಟಿ ಗೆ ಸೇರಿಸಬೇಕು. ಕೂಡಲೇ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಕಡಿಮೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.