ಪೆಟ್ರೋಲ್, ಡಿಸೇಲ್ ಹೆಚ್ಚಳ ವಿರೋಧಿಸಿ ಬೈಕ್ ತಳ್ಳು ಪ್ರತಿಭಟನೆ

Mourya circle

ಬೆಂಗಳೂರು, ಡಿ.೨೩-ಪೆಟ್ರೋಲ್, ಡಿಸೇಲ್ ಬೆಲೆ ಹಾಗೂ ತೆರಿಗೆ ಇಳಿಸುವಂತೆ ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನಗರದಲ್ಲಿ ಇಂದು ವಿನೂತನ ಬೈಕ್ ತಳ್ಳು ಪ್ರತಿಭಟನೆ ನಡೆಸಿದರು.
ನಗರದ ಮೌರ್ಯ ವೃತ್ತದಲ್ಲಿ ಬೆಳಿಗ್ಗೆ ಸೇರಿದ ಪಕ್ಷದ ಕಾರ್ಯಕರ್ತರು ಬೈಕ್ ತಳ್ಳು ಪ್ರತಿಭಟನೆ ನಡೆಸಿ ಪೆಟ್ರೋಲ್, ಡಿಸೇಲ್ ಬೆಲೆ ಹಾಗೂ ತೆರಿಗೆ ಇಳಿಸುವವರೆಗೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಕ್ಷದ ನಗರ ಅಧ್ಯಕ್ಷ ಮೋಹನ್ ದಾಸರಿ ಮಾತನಾಡಿ,ಕೇಂದ್ರ ಬಿಜೆಪಿ ಹಾಗೂ ರಾಜ್ಯ ಸರ್ಕಾರದ ನಿರ್ಧಾರಗಳಿಂದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯುತ್ ದರ ತೆರಿಗೆ ಹೆಚ್ಚಳದಿಂದ ಜನಸಾಮಾನ್ಯರನ್ನು ತೊಂದರೆಗೆ ಸಿಲುಕಿಸಲಾಗುತ್ತಿದೆ ದೇಶದ ಇತಿಹಾಸದಲ್ಲೇ ಪೆಟ್ರೋಲ್ ಬೆಲೆ ಹೆಚ್ಚಳ ಮಾಡಿ ಜನರನ್ನು ದೋಚಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ವರ್ಷ ಇದೇ ಹೊತ್ತಿನಲ್ಲಿ ಕಚ್ಚಾತೈಲದ ಬೆಲೆ ೬೨ ಡಾಲರ್ ಇತ್ತು ಈಗ ೪೦ ಡಾಲರ್‌ಗೆ ಇಳಿದಿದೆ ಆದರೂ ಪೆಟ್ರೋಲ್ ಬೆಲೆ ೮೬ ರೂಪಾಯಿಗಿಂತ ಹೆಚ್ಚಿದೆ. ಪ್ರಧಾನಿ ನರೇಂದ್ರ ಮೋದಿಯವರು ಮಾತ್ರ “ತಿನ್ನಲ್ಲ, ತಿನ್ನಲು ಬಿಡುವುದಿಲ್ಲ” ಎಂದು ಭಜನೆ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಪೆಟ್ರೋಲ್‌ಅನ್ನು ೪೦ ರೂಪಾಯಿಗೆ ನೀಡಬಹುದು ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಅಲ್ಲದೇ ಕಚ್ಚಾ ತೈಲವನ್ನು ಸಂಸ್ಕರಿಸಲು ಕೇವಲ ೩೦ ರೂಪಾಯಿ ಖರ್ಚಾಗುತ್ತದೆ ಎಂದಿದ್ದಾರೆ. ಹಾಗಾದರೆ ಸರ್ಕಾರಕ್ಕೂ ಕಳ್ಳನಿಗೂ ಏನು ವ್ಯತ್ಯಾಸ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಸಹ ಸಂಚಾಲಕ ವಿಜಯ್ ಶರ್ಮ, ಮಾಧ್ಯಮ ಸಂಚಾಲಕ ಜಗದೀಶ್ ಸದಂ, ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ಉಪಾಧ್ಯಕ್ಷರಾದ ಸುರೇಶ್ ರಾಥೋಡ್, ನಾಗಣ್ಣ.ಕೆ.ಬಿ, ರಾಜಕೀಯ ಚಟುವಟಿಕೆಗಳ ಉಸ್ತುವಾರಿ ಲಕ್ಷ್ಮಿಕಾಂತ್ ರಾವ್, ಫಣಿರಾಜ್ ಭಾಗವಹಿಸಿದ್ದರು.