ಪೆಟ್ರೋಲ್, ಡಿಸಲ್ ಜಿಎಸ್ಟಿ ವ್ಯಾಪ್ತಿಗೆ ತನ್ನಿ: ಬಿಎಸ್ಪಿ ಮನವಿ

ಚಿತ್ರದುರ್ಗ, ಜೂ.10: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅವೈಜ್ಞಾನಿಕ ತೆರಿಗೆ ರದ್ದುಗೊಳಿಸಿ, ಜನ ಸಾಮಾನ್ಯರ ಮೇಲೆ ಬೀಳುವ ಹೊರೆಯನ್ನು ತಪ್ಪಿಸಿ, ಅವುಗಳನ್ನು ಜಿಎಸ್ಪಿ ವ್ಯಾಪ್ತಿಗೆ ತರುವಂತೆ  ಕೇಂದ್ರ ಸರ್ಕಾರಕ್ಕೆ ಸೂಚಿನೆ ನೀಡಬೇಕು ಎಂದು ಒತ್ತಾಯಿಸಿ ಬಹುಜನ ಸಮಾಜ ಪಾರ್ಟಿಯವರು ಇಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರವು ಅವೈಜ್ಞಾನಿಕವಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಶೇಕಡ ಮುನ್ನೂರಕ್ಕೂ ಹೆಚ್ಚು ಪ್ರತಿಶತ ತೆರಿಗೆ ವಿಧಿಸಿದೆ. ಇದರಿಂದ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 100 ರೂಪಾಯಿಗಿಂತಲೂ ಹೆಚ್ಚಾಗಿದ್ದು, ಜಗತ್ತಿನ ಯಾವ ದೇಶದಲ್ಲೂ ಸಹ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಇಷ್ಟೊಂದು ತೆರಿಗೆ ವಿಧಿಸಿ ತನ್ನ ದೇಶದ ಪ್ರಜೆಗಳನ್ನು ಶೋಷಣೆ ಮಾಡುವ ಇನ್ನೊಂದು ಸರ್ಕಾರವಿಲ್ಲ ಎಂದು ಸರ್ಕಾರದ ಕಾರ್ಯವೈಖರಿ ವಿರುದ್ದ ಕಿಡಿಕಾರಿದರು.
ಆಹಾರ ಧಾನ್ಯಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನ ಮುಟ್ಟಿದೆ. ಇಂತಹ ಸಂದರ್ಭದಲ್ಲಿ ಜನ ಸಾಮಾನ್ಯರ ನೆರವಿಗೆ ನಿಲ್ಲಬೇಕಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮನಬಂದಂತೆ ಪೆಟ್ರೋಲ್ ಮತ್ತು ಡೀಸೆಲ್‌ ಮೇಲೆ ತೆರಿಗೆ ವಿಧಿಸಿ ಜನರನ್ನು ಮತ್ತಷ್ಟು ಶೋಷಣೆ ಮಾಡುತ್ತಿವೆ. ಆದ್ದರಿಂದ ರಾಷ್ಟ್ರಪತಿಗಳು ಮಧ್ಯಪ್ರವೇಶ ಮಾಡಿ ಇಂತಹ ಅವೈಜ್ಞಾನಿಕ ತೆರಿಗೆ ಏರಿಕೆಯನ್ನು ತಡೆಯಲು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕೆಂದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಸ್. ವೆಂಕಟೇಶ್ ಐಹೊಳೆ, ಎಸ್.ಕುಮಾರ್, ಗೀರೀಶ್, ಪಾಂಡುರಂಗಯ್ಯ, ತಿಮ್ಮಣ್ಣ, ಶಶಿ, ಮಂಜುನಾಥ್ ಸೇರಿದಂತೆ ಇತರರು ಹಾಜರಿದ್ದರು.