ಪೆಂಟಗನ್‌ನ ವರ್ಗೀಕೃತ ರಹಸ್ಯ ಮಾಹಿತಿ ಸೋರಿಕೆ

ವಾಷಿಂಗ್ಟನ್, ಏ.೧೧- ಅಮೆರಿಕ ರಕ್ಷಣಾ ಇಲಾಖೆಯ ವರ್ಗೀಕೃತ ದಾಖಲೆಗಳ ಸೋರಿಕೆಯು ರಾಷ್ಟ್ರೀಯ ಭದ್ರತೆಗೆ ಬಹಳ ಗಂಭೀರ ಅಪಾಯವಾಗಿದೆ ಎಂದು ಪೆಂಟಗನ್ (ಅಮೆರಿಕಾದ ಮಿಲಿಟರಿ ವಿಭಾಗ) ಹೇಳಿದೆ. ಸೋರಿಕೆಯಾದ ದಾಖಲೆಗಳಲ್ಲಿ ಉಕ್ರೇನ್‌ನಲ್ಲಿನ ಯುದ್ದದ ವಿವರಗಳು, ಚೀನಾ ಹಾಗೂ ಅಮೆರಿಕಾ ಮಿತ್ರರಾಷ್ಟ್ರಗಳ ಬಗೆಗಿನ ಸೂಕ್ಷ್ಮ ಮಾಹಿತಿಗಳು ಒಳಗೊಂಡಿದೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೆಂಟಗಾನ್‌ನ ಸಾರ್ವಜನಿಕ ವ್ಯವಹಾರಗಳ ರಕ್ಷಣಾ ಕಾರ್ಯದರ್ಶಿಯ ಸಹಾಯಕ ಕ್ರಿಸ್ ಮೆಘರ್, ಇದು ಹೇಗೆ ಸಂಭವಿಸಿತು ಎಂಬುದರ ವ್ಯಾಪ್ತಿಯನ್ನು ನಾವೀಗ ತನಿಖೆ ಮಾಡುತ್ತಿದ್ದೇವೆ. ಈ ರೀತಿಯ ಮಾಹಿತಿಯನ್ನು ಹೇಗೆ ಮತ್ತು ಯಾರಿಗೆ ವಿತರಿಸಲಾಗುತ್ತದೆ ಎಂಬುದರ ಬಗ್ಗೆ ಕೂಲಂಕುಶ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಮೂಲಗಳ ಪ್ರಕಾರ ಸೋರಿಕೆಯಾದ ದಾಖಲೆಗಳು ದೇಶದ ಹಿರಿಯ ನಾಯಕರಿಗೆ ನೀಡುವ ದಾಖಲೆಗಳ ಸ್ವರೂಪದಲ್ಲೇ ಇದೆ ಎನ್ನಲಾಗಿದೆ. ಇನ್ನು ಸೋರಿಕೆಯ ಮೂಲವನ್ನು ಪತ್ತೆಹಚ್ಚುವ ಸಲುವಾಗಿ ತನಿಖೆಯನ್ನು ಆರಂಭಿಸಲಾಗಿದೆ. ಆರಂಭದಲ್ಲಿ ಸೋರಿಕೆಯಾದ ದಾಖಲೆಗಳು ಟ್ವಿಟರ್, ೪ಚಾನ್, ಟೆಲಿಗ್ರಾಂನಂಥ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿತ್ತು. ಈ ದಾಖಲೆಗಳಲ್ಲಿ ಉಕ್ರೇನ್‌ನಲ್ಲಿನ ಯುದ್ದದ ಬಗ್ಗೆ ವಿವರವಾದ ಮಾಹಿತಿಯ ಜೊತೆಗೆ ಅಮೆರಿಕಾದ ಮಿತ್ರರಾಷ್ಟ್ರಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳು ಕೂಡ ಸೇರಿವೆ. ಇನ್ನು ಅತ್ತ ಉಕ್ರೇನ್‌ಗೆ ಸಂಬಂಧಿಸಿದ ಮಾಹಿತಿಗಳು ಸೋರಿಕೆಯಾದ ಹಿನ್ನೆಲೆಯಲ್ಲಿ ಇದೀಗ ಉಕ್ರೇನ್ ತನ್ನ ಮಿಲಿಟರಿ ಯೋಜನೆಗಳನ್ನು ಬದಲಾಯಿಸಿದೆ ಎಂದು ಅಧ್ಯಕ್ಷ ವೊಲೊವಿಮಿರ್ ಝೆಲೆನ್ಸ್ಕಿಯ ನಿಕಟವರ್ತಿಗಳು ತಿಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಇತರ ದಾಖಲೆಗಳು ಮಧ್ಯಪ್ರಾಚ್ಯ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿನ ರಕ್ಷಣಾ ಮತ್ತು ಭದ್ರತಾ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುತ್ತವೆ ಎಂದು ವರದಿಯಾಗಿದೆ.