ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಡಿಪಿಎಸ್‍ಇ ತರಬೇತಿ ಪಡೆದವರಿಗೆ ಶಿಕ್ಷಕರ ನೇಮಕಾತಿಗೆ ಆಗ್ರಹ

ಕಲಬುರಗಿ,ಜು.20: ಪೂರ್ವ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಡಿಪಿಎಸ್‍ಇ ತರಬೇತಿ ಪಡೆದ ಅಭ್ಯರ್ಥಿಗಳಿಂದ ಬೋಧನೆ ಮಾಡುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ದಲಿತ ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ್ ಎಸ್. ಭಂಡಾರಿ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಇಂಗ್ಲೀಷ್ ಮಾಧ್ಯಮ ಶಾಲೆಗಳು ಕಳೆದ 2018-2019ರಿಂದ ಸುಮಾರು 1500ಕ್ಕಿಂತ ಅಧಿಕ ಸರ್ಕಾರಿ ಶಾಲೆಗಳು ಇವೆ. ಕೆಪಿಎಸ್ ಕರ್ನಾಟಕ ಪಬ್ಲಿಕ್ ಶಾಲೆಗಳು 276 ಇದ್ದು, ಆಂಗ್ಲ ಮಾಧ್ಯಮದಲ್ಲಿ ಎಲ್‍ಕೆಜಿ, ಯುಕೆಜಿ ಹಾಗೂ ಒಂದು ಮತ್ತು 2ನೇ ತರಗತಿ ಪ್ರಾರಂಭಿಸಲಾಗಿದ್ದು, ಅಲ್ಲಿ ಅರ್ಹರಿಗೆ ಶಿಕ್ಷಕರ ನೇಮಕಾತಿಯಲ್ಲಿ ಪರಿಗಣಿಸಲಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸದರಿ ಶಾಲೆಗಳಲ್ಲಿ ಬೋಧಿಸಲು ನಿಗದಿತ ವಿದ್ಯಾರ್ಹತೆ ಹೊಂದಿದ್ದ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿಲ್ಲ. ಬದಲಾಗಿ ಅರ್ಹತೆ ಇಲ್ಲದವರಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅದರಲ್ಲಿಯೂ ಅತಿಥಿ ಶಿಕ್ಷಕರಾಗಿ ನೇಮಕ ಹೊಂದಿದವರು ಬೋಧನೆ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳ ಕಲಿಕೆಯಲ್ಲಿ ಪರಿಣಾಮಕಾರಿ ಆಗುತ್ತಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಅರ್ಹತೆ ಹೊಂದಿದ ಡಿಪಿಎಸ್‍ಇ ತರಬೇತಿ ಪಡೆದ ಅಭ್ಯರ್ಥಿಗಳನ್ನು ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕಾತಿ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಒಂದು ವೇಳೆ ಅನರ್ಹರಿಗೆ ನೇಮಕಾತಿ ಮಾಡಿದಲ್ಲಿ ಡಿಪಿಎಸ್‍ಇ ತರಬೇತಿ ಪಡೆದವರು ನೇಮಕಾತಿಯಿಂದ ವಂಚಿತಗೊಳ್ಳುತ್ತಾರೆ. ಅವರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಶಿವಲಿಂಗಪ್ಪ ದೊಡ್ಡಮನಿ, ಮೋಹನ್ ಚಿನ್ನಾ, ಕಪಿಲ್ ವಾಲಿ, ಶ್ರೀಕಾಂತ್ ರೆಡ್ಡಿ, ಗುರು ಮಾಳಗೆ, ಪಂಚಶೀಲ್ ವಿ. ಚಾಂಬಾಳ್, ಎಂ.ಡಿ. ಅಬ್ಬಾಸ್, ಮಲ್ಲೇಶಿ ಯಾದವ್, ರಾಜು ಲೆಂಗಟಿ, ಅಭ್ಯರ್ಥಿಗಳಾದ ಆಯೇಷಾ, ಪೂಜಾ ಮುಂತಾದವರು ಉಪಸ್ಥಿತರಿದ್ದರು.