ಪೂರ್ವ ಆಸ್ಟ್ರೇಲಿಯಾ ಕಾಡ್ಗಿಚ್ಚಿನ ಪ್ರಮಾಣ ಏರಿಕೆ

ಸಿಡ್ನಿ (ಆಸ್ಟ್ರೇಲಿಯಾ), ಮಾ.೭- ಭಾರತ ಸೇರಿದಂತೆ ಹಲವು ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಸದ್ಯ ಉಷ್ಣತೆಯ ವಾತಾವರಣ ನಿರ್ಮಾಣವಾಗಿದ್ದು, ಇದೇ ರೀತಿಯಲ್ಲಿ ಆಸ್ಟ್ರೇಲಿಯಾದ ಪೂರ್ವ ಕರಾವಳಿಯಾದ್ಯಂತ ತೀವ್ರವಾದ ಶಾಖದ ಅಲೆಯು ಮುಂದುವರಿದಿದ್ದು, ಮುಂದೆ ಇದು ಹೆಚ್ಚಿನ ಪ್ರಮಾಣದ ಕಾಡ್ಗಿಚ್ಚಿಗೆ ಸಂಭವಿಸಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
೨೦೧೯-೨೦೨೦ರ ಅವಧಿಯಲ್ಲಿ ಆಸ್ಟ್ರೇಲಿಯಾದಲ್ಲಿ ಉಷ್ಣತೆಯ ವಾತಾವರಣಕ್ಕೆ ಜನತೆ ಅಕ್ಷರಶಃ ನಲುಗಿದ್ದರು. ಆದರೆ ಕಳೆದೆರಡು ವರ್ಷಗಳಲ್ಲಿ ಇದಕ್ಕೆ ಕಡಿವಾಣ ಬಿದ್ದಿದ್ದರೂ ಈ ಅವಧಿಯಲ್ಲಿ ನೆರೆ ಪರಿಸ್ಥಿತಿಯಿಂದ ಜನರು ಹೈರಣಾಗಿದ್ದರು. ಆದರೆ ಇದೀಗ ಪ್ರಸಕ್ತ ವರ್ಷ ಉಷ್ಣತೆ ಪ್ರಮಾಣ ನಿರಂತರವಾಗಿ ಏರಿಕೆಯಾಗುತ್ತಿದ್ದು, ಕಾಡ್ಗಿಚ್ಚಿನ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ಸದ್ಯದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸ್ಥಳೀಯ ಅಗ್ನಿಶಾಮಕ ದಳಗಳಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದ್ದು, ಯಾವ ಪರಿಸ್ಥಿತಿಯಲ್ಲೂ ತಯಾರಿರುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಆಸ್ಟ್ರೇಲಿಯಾದಲ್ಲಿ ಹಲವೆಡೆ ಕಾಡ್ಗಿಚ್ಚು ಸಂಭವಿಸಿದ್ದು, ಮುಂದಿನ ದಿನಗಳಲ್ಲಿ ಇದು ಏರಿಕೆಯಾಗಲಿದೆ ಎನ್ನಲಾಗಿದೆ. ಸಿಡ್ನಿಯ ವಾಯುವ್ಯಕ್ಕೆ ಸುಮಾರು ೨೫೦ ಕಿ.ಮೀ. ದೂರದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕಳೆದ ಎರಡು ವರ್ಷಗಳಲ್ಲಿ ಮೊದಲ ಬಾರಿಗೆ ತುರ್ತು ಅಗ್ನಿಶಾಮಕ ಎಚ್ಚರಿಕೆ ರವಾನಿಸಲಾಗಿದೆ. ಅಸ್ಟ್ರೇಲಿಯಾದಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ನ್ಯೂ ಸೌತ್ ವೇಲ್ಸ್‌ನ ಹಲವೆಡೆ ಉಷ್ಣತೆಗೆ ತತ್ತರಿಸಿರುವ ಜನತೆಯ ಸ್ಥಳಾಂತರಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ. ಅಲ್ಲದೆ ಆಸ್ತಿಪಾಸ್ತಿಗಳಿಗೆ ಕೂಡ ಹಾನಿಯಾಗಿದೆ ಎನ್ನಲಾಗಿದೆ. ೨೦೨೧ರ ಜನವರಿ ಬಳಿಕ ಇದೇ ಮೊದಲ ಬಾರಿಗೆ ರಾಜ್ಯದ ಕೆಲವು ಕಡೆಗಳಲ್ಲಿ ಉಷ್ಣಾಂಶ ಪ್ರಮಾಣ ದಾಖಲೆಯ ೪೦ ಡಿಗ್ರಿ ಸೆಲ್ಸಿಯಸ್ ತಲುಪಿದೆ. ರಾಜ್ಯದ ೩೩ ಕಡೆಗಳಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಈ ಪೈಕಿ ೧೦ ಕಡೆಗಳಲ್ಲಿ ಬೆಂಕಿ ಇನ್ನೂ ನಿಯಂತ್ರಣ ಬಂದಿಲ್ಲ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರದೇಶಗಳಲ್ಲಿ ಬೆಚ್ಚನೆಯ ಬಲವಾದ ಗಾಳಿ ಬೀಸುತ್ತಿದ್ದು, ಇದರಿಂದ ಬೆಂಕಿ ಹತೋಟಗೆ ತರಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.