
ಬ್ಯಾಡಗಿ,ಮಾ.6: ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಡಬಲ್ ಇಂಜಿನ್ ಸರ್ಕಾರದಿಂದ ಇಂದು ನಾವು ತಿನ್ನುವ ಆಹಾರದ ಮೇಲೆಯೂ ತೆರಿಗೆ ಕಟ್ಟುವ ಪರಿಸ್ಥಿತಿ ಬಂದಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜನಪರ ಆಡಳಿತವನ್ನು ನಡೆಸುವ ಮೂಲಕ ಚುನಾವಣಾ ಪೂರ್ವದಲ್ಲಿ ನೀಡಿದ 65 ಭರವಸೆಗಳನ್ನು ಈಡೇರಿಸಿದ ಏಕೈಕ ಪಕ್ಷ ಎಂದರೆ ಅದು ಕಾಂಗ್ರೆಸ್ ಪಕ್ಷವಾಗಿದೆ ಎಂದು ಮಾಜಿ ಸಚಿವ ಬಸವರಾಜ ಶಿವಣ್ಣನವರ ಹೇಳಿದರು.
ಬ್ಯಾಡಗಿ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಮಾರ್ಚ್ 12ರಂದು ನಡೆಯುವ ಪ್ರಜಾಧ್ವನಿ ಸಮಾವೇಶದ ಅಂಗವಾಗಿ ಪಟ್ಟಣದ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಾವುದೇ ಪಕ್ಷ ಗೆಲ್ಲಬೇಕಾದರೆ ಕಾರ್ಯಕರ್ತರ ಪಾತ್ರ ಬಹುವಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರೆಲ್ಲರೂ ಸೇರಿ ಪಕ್ಷದ ಗೆಲುವಿಗೆ ಕಂಕಣ ಬದ್ಧರಾಗಿ ಶ್ರಮಿಸಬೇಕೆಂದು ತಿಳಿಸಿದರಲ್ಲದೇ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು 1ಲಕ್ಷ 23 ಸಾವಿರ ಕೋಟಿ ರೈತರ ಸಾಲವನ್ನು ಮನ್ನಾ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಾವು ಕೊಟ್ಟ ಗ್ಯಾರಂಟಿ ಭರವಸೆಯನ್ನು ಈಡೇರಿಸಲಾಗುವುದು ಅಲ್ಲದೆ ಸಬ್ಸಿಡಿಯಾಗಿ ಸಿಲಿಂಡರಿಗೆ 500 ಸಹಾಯ ಧನ ನೀಡಲಾಗುವುದು. ನಮ್ಮ ಪಕ್ಷ ಸುಳ್ಳು ಹೇಳಿ ಅಧಿಕಾರಕ್ಕೆ ಬರುವುದಿಲ್ಲ ಎಂದರು.
ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ, ದೇಶ ಬಿಟ್ಟು ಓಡಿ ಹೋಗುವ ಉದ್ಯಮಿಗಳಿಗೆ ಕೇಂದ್ರದ ಬಿಜೆಪಿ ಸರ್ಕಾರ 11.ಲಕ್ಷ ಕೋಟಿ ಸಾಲವನ್ನು ಎನ್’ಪಿಎ ಮಾಡಿದೆ. ದೇಶದಲ್ಲಿ ವಿವಿಧ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಲು ಅದಾನಿ ಅಂಬಾನಿಯಂತಹ ಕಾಪೆರ್Çರೇಟ್ ಮಾಲೀಕರೇ ನೇರ ಕಾರಣರಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಭಾಗ್ಯಜ್ಯೋತಿ, ರೈತರ ಸಾಲ ಮನ್ನಾ ಸೇರಿದಂತೆ ಅನೇಕ ಬಡವರ ಪರ ಯೋಜನೆಗಳನ್ನು ಜಾರಿ ಮಾಡಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮನೆಯ ಯಜಮಾನಿಗೆ ವರ್ಷಕ್ಕೆ 24.ಸಾವಿರ, ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಹಾಗೂ ಪ್ರತಿ ವ್ಯಕ್ತಿಗೆ 10 ಕೆಜಿ ಉಚಿತ ಅಕ್ಕಿ ವಿತರಣೆ ಮಾಡಲು ಸಿದ್ದರಾಗಿದ್ದು, ಪಕ್ಷದ ಕಾರ್ಯಕರ್ತರು ಪ್ರತಿ ಮನೆಗೆ ತೆರಳಿ ನಮ್ಮ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವ ಮೂಲಕ ಪಕ್ಷದ ಗೆಲುವಿಗೆ ಸನ್ನದ್ಧರಾಗುವಂತೆ ಕರೆ ನೀಡಿದರು.
ಸಭೆಯಲ್ಲಿ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಉಪಾಧ್ಯಕ್ಷ ಡಾ.ಎ.ಎಂ.ಸೌದಾಗರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ, ಬೀರಪ್ಪ ಬಣಕಾರ, ಬಸವರಾಜ ಸವಣೂರು, ಪುರಸಭೆ ಸದಸ್ಯರಾದ ಮಹ್ಮದರಫೀಕ ಮುದಗಲ್ಲ, ರೇಷ್ಮಾ ಶೇಖ್, ಪದವೀಧರ ಕ್ಷೇತ್ರದ ಅಧ್ಯಕ್ಷ ಪ್ರಕಾಶ ಬನ್ನಿಹಟ್ಟಿ, ಒಬಿಸಿ ಜಿಲ್ಲಾಧ್ಯಕ್ಷ ನಿಂಗನಗೌಡ ಗೌಡ್ರ, ಮುನಾಫ್ ಎರೇಸಿಮಿ, ನಾಗರಾಜ ಆನ್ವೇರಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಂಕು ಬೆಂಚಳ್ಳಿ, ಎಸ್.ಸಿ.ಘಟಕದ ಅಧ್ಯಕ್ಷ ಜಗದೀಶ ದೊಡ್ಡಮನಿ, ಶಿವಪ್ಪ ಅಂಬ್ಲಿ, ರಾಜೀವ ಶಿಗ್ಲಿ, ಸುರೇಶಗೌಡ ಪಾಟೀಲ, ಖಾದರಸಾಬ ದೊಡ್ಡಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ರಮೇಶ ಸುತ್ತಕೋಟಿ ಸ್ವಾಗತಿಸಿದರು. ಮಾರುತಿ ಅಚ್ಚಿಗೇರಿ ವಂದಿಸಿದರು.