ಪೂರ್ವಪ್ರಾಥಮಿಕ ಆಂಗ್ಲ ಮಾಧ್ಯಮ ತರಗತಿ ಪ್ರಾರಂಭಕ್ಕೆ ಶಿಕ್ಷಣ ಅಧಿಕಾರಿ ಪರಿವೀಕ್ಷಣೆ”


ಸಂಜೆವಾಣಿ ವಾರ್ತೆ
ಸಿರಿಗೇರಿ ಮಾ, 14. ಗ್ರಾಮದಲ್ಲಿನ ಸರ್ಕಾರಿ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಾಲಾ ಹಂತದಿಂದ ಆಂಗ್ಲ (ಇಂಗ್ಲೀಷ್) ಮಾಧ್ಯಮ ತರಗತಿ ಪ್ರಾರಂಭಿಸುವ ಕುರಿತು ನಿನ್ನೆ ಮಾ.13 ರಂದು ಶಿಕ್ಷಣ ಇಲಾಖೆಯ ಡಿವೈಪಿಸಿ ಅಧಿಕಾರಿ ಎಚ್.ವಿ.ಶಿವಲಿಂಗರೆಡ್ಡಿ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದರು. ಈ ಹಿಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಮಾದರಿ (ಮಾಡಲ್) ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿ ಪ್ರಾರಂಭಿಸಲು ಶಿಕ್ಷಣ ಇಲಾಖೆಯಿಂದ ಅನುಮತಿ ನೀಡಲಾಗಿತ್ತು. ಆದರೂ ಅದು ಕಾರ್ಯರೂಪಕ್ಕೆ ಬರದೇ ಕುಂಟಿತಗೊಂಡಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸ್ಥಳೀಯ ವಿವಿಧ ಸಂಘನೆಗಳ ಒಕ್ಕೂಟದಿಂದ ಬಳ್ಳಾರಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿಡಿಪಿಐ ರವರಿಗೆ ಪುನಹ ಮನವಿ ಮಾಡಿ ಒತ್ತಾಯಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಭೇಟಿ ನೀಡಿದ್ದರು.
ಅಧಿಕಾರಿಗಳು ಭೇಟಿನೀಡಿದ ವೇಳೆ ಸಂಘಟನೆ ಮುಖಂಡರು, ಪಿಡಿಓ ಶಿವಕುಮಾರಕೋರಿ ಇವರು ಕಳೆದವರ್ಷ ಪ್ರಾರಂಭಿಸಿದ ಅಂಗ್ಲ ಮಾಧ್ಯಮ ತರಗತಿ ನಿಲುಗಡೆಗೆ ಕಾರಣಗಳನ್ನು ಕೇಳಿದರು. ಅಲ್ಲದೇ ಸಂಘಟನೆಗಳ ಮುಖಂಡರು ಮುದ್ದಟನೂರು ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯ ಶಾಲೆಬಿಟ್ಟ ಮಕ್ಕಳನ್ನು ಪುನಹ ಶಾಲೆಗೆ ಕರೆತರುವ ಕೆಲಸ ಗಂಭೀರವಾಗಿ ನಡೆದಾಗ ಸೌಜನ್ಯಕ್ಕಾಗಿಯಾದರೂ ಶಿಕ್ಷಣ ಇಲಾಖೆಯ ನಿರ್ಧೇಶಕರು ಭೇಟಿ ನೀಡಲಿಲ್ಲ. ಈ ಗೊಂದಲದಲ್ಲಿ ಇಬ್ಬರು ಗೈರು ಹಾಜರಿ ವಿದ್ಯಾರ್ಥಿಗಳಿಗೆ 10ನೇ ತರಗತಿ ಪರೀಕ್ಷೆಗೆ ಪ್ರವೇಶಪತ್ರ (ಹಾಲ್ ಟಿಕೆಟ್) ಬಂದಿಲ್ಲ ಇದಕ್ಕೆ ಯಾರು ಹೊಣೆ ಎಂದು ಪ್ರಶ್ನೆಮಾಡಿದರು. ಇದಕ್ಕೆ ಸಮನ್ವಯ ಅಧಿಕಾರಿ ಉತ್ತರಿಸಿ ಅವರ ಮಾರ್ಗದರ್ಶನದಂತೆ ನಾವು ಮುದ್ದಟನೂರು ಶಾಲೆ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನ ಮಾಡಿದ್ದೇವೆ.
ಆಂಗ್ಲಮಾಧ್ಯಮ ತರಗತಿ ಪ್ರಾರಂಭಿಸಲು ಬೆಂಗಳೂರು ಕೇಂದ್ರ ಕಛೇರಿಯಿಂದ ಅನುಮೋದನೆಯಾಗಬೇಕೆಂದು ತಿಳಿಸಿ, ಮೇಲಧಿಕಾರಿಗಳಲ್ಲಿ ಪೋನ್‍ಕರೆಯಿಂದ ಮಾತನಾಡಿ ಮುಂದಿನ ಶೈಕ್ಷಣಿಕ ವರ್ಷ 2023-24 ನೇ ಸಾಲಿನಿಂದ ಮಾಡಲ್ ಶಾಲೆಯಲ್ಲಿ ಆಂಗ್ಲಮಾಧ್ಯಮ ತರಗತಿ ಪ್ರಾರಂಭಿಸಲಾಗುವುದೆಂದು ತಿಳಿಸಿದರು. ಇದೇವೇಳೆ ಆನ್‍ಲೈನ್‍ನಲ್ಲಿ ಪ್ರವೇಶಾತಿ ಅರ್ಜಿಯನ್ನು ಹಾಕಿಸಿಕೊಂಡು ತೋರಿಸಿದರು. ಈ ಕಾರ್ಯದ ಆರಂಭದಲ್ಲಿ ಸಂಘಟನೆಯವರು, ಗ್ರಾಮಾಡಳಿತ, ಎಸ್‍ಡಿಎಂಸಿಯವರು ಸಹಕರಿಸಬೇಕಾಗಿದೆ ಎಂದು ತಿಳಿಸಿದರು. ಇದಕ್ಕೆ ವ್ಯವಸ್ಥೆಯನ್ನು ಮಾಡಲಾಗುವುದೆಂದು ಹಾಜರಿದ್ದ ಪಿಡಿಓ, ಸಂಘಟನೆ ಮುಖಂಡರು ಹೇಳಿದರು. ಇದೇವೇಳೆ ಮನವಿಪತ್ರಗಳನ್ನು ಶಿಕ್ಷಣ ಇಲಾಖೆಗೆ ಸಲ್ಲಿಸಲಾಯಿತು. ಮುಖ್ಯಗುರು ಸತೀಶ್‍ಕುಮಾರ್, ಸಿಆರ್‍ಪಿ ಅರುಣಕುಮಾರ್, ಮುಖಂಡರಾದ ಪೂಜಾರಿಸಿದ್ದಯ್ಯ, ಗ್ರಾ.ಪಂ.ಉಪಾಧ್ಯಕ್ಷ ಭಜಂತ್ರಿರಮೇಶ, ಡ್ರೈವರ್‍ಹುಲುಗಪ್ಪ, ಎಸ್‍ಡಿಎಂಸಿ ಅಧ್ಯಕ್ಷ ಬಿ.ಹನುಮಂತ,  ವಕೀಲ ರಾಂಬಾಬು, ಮಾಸ್ತಿಪ್ರಕಾಶ, ಎಚ್.ಲಕ್ಷ್ಮಣಭಂಡಾರಿ, ಎಚ್.ಉಮೇಶ್, ಸದ್ದಾಂ, ಹಾವಿನಹಾಳು ಸಿ.ವೀರೇಶ್,  ಇತರರು ಹಾಜರಿದ್ದರು.