
ಧಾರವಾಡ, ಆ9: ಉಪ್ಪಿನ ಬೆಟಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ಯ ಇಲಾಖೆ ವತಿಯಿಂದ ಪ್ರಾರಂಭವಾಗುತ್ತಿರುವ ಶಿಶುಪಾಲನಾ ಕೇಂದ್ರದ ಪೂರ್ವ ತಯಾರಿಯನ್ನು ಜಿಲ್ಲಾ ಪಂಚಾಯತನ ಸಿ.ಇ.ಒ ಸ್ವರೂಪ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಖುದ್ದು ಬೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವರೂಪ ಅವರು ಮೂರು ವರ್ಷದ ಒಳಗಿನ ಮಕ್ಕಳ ಲಾಲನೆ ಪಾಲನೆಗಾಗಿ ಈ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು,ವಿಶೇಷವಾಗಿ ನರೇಗಾ ಯೋಜನೆಯಡಿ ದುಡಿಯುತ್ತಿರುವ ಕೂಲಿ ಕಾರ್ಮಿಕರ ಮಕ್ಕಳಿಗಾಗಿ ಈ ಯೋಜನೆಯನ್ನು ಜಾರಿಮಾಡಲಾಗಿದೆ. ಜತೆಗೆ ಗ್ರಾಮದಲ್ಲಿ ಯಾವುದೇ ಪಾಲಕರು ಎಲ್ಲೆ ಕೆಲಸ ಕಾರ್ಯ ಮಾಡುವರಿದ್ದರು ಕೂಡ ತಮ್ಮ ಮಕ್ಕಳನ್ನು ತಂದು ಈ ಕೇಂದ್ರದಲ್ಲಿ ಬಿಡಬಹುದಾಗಿದೆ. ಈ ಕೇಂದ್ರದ ನಿರ್ವಹಣೆಗಾಗಿ ಓರ್ವ ಮಹಿಳೆಯನ್ನು ನೇಮಿಸಲಾಗುತ್ತಿದ್ದು ಈಗಾಗಲೇ ಅವರಿಗೆ ಆ ಕುರಿತು ತರಬೇತಿ ನೀಡಲಾಗಿದೆ ಎಂದರು.
ಅಗಷ್ಟ 10 ರಂದು ಈ ಕೇಂದ್ರಗಳು ಕಾರ್ಯಾರಂಭ ಮಾಡಲಿದ್ದು ಅಗಷ್ಟ 15 ರಂದು ಅಧಿಕೃತವಾಗಿ ಉದ್ಘಾಟನೆಗೊಳ್ಳಲಿವೆ ಎಂದು ತಿಳಿಸಿದರು.ಕೇಂದ್ರಕ್ಕೆ ಆಗಮಿಸುವ ಮಕ್ಕಳಿಗೆ ಬೇಕಾದ ಆಹಾರ ಸೇರಿದಂತೆ ಅವಶ್ಯವಿರುವ ಎಲ್ಲ ಸೌಲಭ್ಯಗಳನ್ನು ಗ್ರಾಮ ಪಂಚಾಯ್ತಿಯವರೇ ನೋಡಿಕೊಳ್ಳಬೇಕಾಗಿದ್ದು ಇದಕ್ಕಾಗಿಯೇ ಸರ್ಕಾರದಿಂದ ಪ್ರತ್ಯೇಕ ಅನುದಾನ ಬಿಡುಗಡೆಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಕೊಠಡಿಯ ವ್ಯವ್ಯಸ್ಥೆ ಸೇರಿದಂತೆ ಬೇಕಾಗಿರುವ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಗ್ರಾಪಂ ಅಧ್ಯಕ್ಷ ಅಧಿಕಾರಿಗಳಿಗೆ ತಿಳಿಸಿದರು.. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿಯವರು ಈಗಾಗಲೇ ಸುಸಜ್ಜಿತ ಕೊಠಡಿಯ ವ್ಯವಸ್ಥೆ ಮಾಡಲಾಗಿದ್ದು ಅವಶ್ಯವಿರುವ ಎಲ್ಲ ಪರಿಕಗಳನ್ನು ಒದಗಿಸಲಾಗುವುದೆಂದು ಹೇಳಿದರು.. ಈ ವೇಳೆ ಜಿಪಂ ಸಿ.ಇ.ಒ ಸ್ವರೂಪ,ಉಪ ಕಾರ್ಯದರ್ಶಿ ಮೂಗೂನೂರಮಠ,ತಾಪಂ ಇ.ಒ ಗಂಗಾಧರ, ಎ.ಡಿ, ಚಂದ್ರಶೇಖರ ಪೂಜಾರ,ಗ್ರಾಮ ಪಂಚಾಯ್ತಿ ಅಧಿಕಾರಿ ಬಿ.ಎ.ಬಾವಾಖಾನವರ ಅಧ್ಯಕ್ಷ ಮಂಜುನಾಥ ಮಸೂತಿ ಸೇರಿದಂತೆ ಹಲವರಿದ್ದರು.