
ಬೀದರ:ಎ.16: ಯುಗಾದಿ ಎಂದರೆ ಯುಗದ ಆದಿ ಎಂದರ್ಥ. ಈ ಹಬ್ಬದ ದಿವಸ ಬೇವು ಬೆಲ್ಲವನ್ನು ಸೇವಿಸಿ ಕಷ್ಟಸುಖಗಳನ್ನು ಜೀವನದಲ್ಲಿ ಸಮಾನವಾಗಿ ಸ್ವೀಕರಿಬೇಕು ಎಂಬ ಸಂದೇಶ ಈ ಹಬ್ಬವು ನೀಡುತ್ತದೆ. ಈ ದಿನ ಪೂಜೆ, ಆಚರಣೆಯಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಸೃಷ್ಟಿಯಾಗುತ್ತದೆ ಎಂದು ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಡಾ. ಸಾವಿತ್ರಿಬಾಯಿ ಹೆಬ್ಬಾಳೆ ತಿಳಿಸಿದರು.
ನೂಪುರ ನೃತ್ಯ ಅಕಾಡೆಮಿ ಬೀದರ ವತಿಯಿಂದ ನಗರದಲ್ಲಿ ಹಮ್ಮಿಕೊಂಡ ಯುಗಾದಿ ಸಂಭ್ರಮ, ಮಹಿಳಾ ದಿನಾಚರಣೆ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಉತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪುರಾಣಗಳ ಪ್ರಕಾರ ಯುಗಾದಿ ಹಬ್ಬದ ದಿನವೇ ಬ್ರಹ್ಮದೇವ ಬ್ರಹ್ಮಾಂಡವನ್ನು ಸೃಷ್ಟಿ ಮಾಡಿದ ಎನ್ನಲಾಗುತ್ತದೆ. ಎಷ್ಟೇ ಯುಗಗಳು ಕಳೆದರೂ ಯುಗಾದಿ ಹಬ್ಬ ಪ್ರತೀ ವರ್ಷ ಮತ್ತೆ ಮತ್ತೆ ಬಂದು ಪ್ರಕೃತಿಯಲ್ಲಿ ಹೊಸ ಮೆರಗನ್ನು ತರುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಅಕಾಡೆಮಿ ನಿರ್ದೇಶಕಿ ಉಷಾ ಪ್ರಭಾಕರ ಮಾತನಾಡಿ ಇಂದು ಮಹಿಳೆಯು ಎಲ್ಲಾ ರಂಗದಲ್ಲೂ ಹೊಸ ಸಾಧನೆಗಳೊಂದಿಗೆ, ಉನ್ನತ ವಿಚಾರಗಳೊಂದಿಗೆ ದಾಪುಗಾಲು ಹಾಕುತ್ತಿದ್ದಾಳೆ. ಮನೆ ಬಿಟ್ಟು ಹೊರಗಡೆ ಬಂದು ದುಡಿದು ಸಂಪಾದಿಸುತ್ತಿರುವುದೇ ಒಂದು ಹೊಸ ಬೆಳವಣಿಗೆ. ಮಹಿಳೆ ಧೈರ್ಯಶಾಲಿಯಾಗಿ ಕುಟುಂಬದ ಜೊತೆಗೆ ಸಮಾಜವನ್ನು ಮತ್ತು ದೇಶವನ್ನು ಮುನ್ನಡೆಸುವ ಶಕ್ತಿ ಹೊಂದಿದ್ದಾಳೆ. ಛಲದಿಂದ ಮುಂದೆ ಬರಬೇಕೆಂದು ಕರೆ ನೀಡಿದರು.
ವೇದಿಕೆ ಮೇಲೆ ಖ್ಯಾತ ಉದ್ಯಮಿಗಳಾದ ವಿಜಯಲಕ್ಷ್ಮೀ ಚೊಂಡೆ, ಕ್ಷಮಾ ರಘುರಾಮ್, ಉಮಾಮಹೇಶ್ವರಿ ಮಣಗೆ ಉಪಸ್ಥಿತರಿದ್ದರು. ಮಮತಾ ಕೋಟ್ಯಾನ್ ನಿರ್ವಹಿಸಿದರು. ಅನನ್ಯ ಪ್ರಭಾಕರ್ ಸ್ವಾಗತಿಸಿದರು. ಪ್ರಾಪ್ತಿ ಪ್ರಭು ವಂದಿಸಿದರು. ಇದೇ ವೇಳೆ ಯುಗಾದಿ ಆಹಾರ ಮೇಳ ನಡೆಸಲಾಯಿತು. ವಿವಿಧ ತಿಂಡಿ ತಿನಿಸುಗಳ ಪ್ರದರ್ಶನ, ಮಾರಾಟ ಯುಗಾದಿ ಮತ್ತು ಮಹಿಳಾ ದಿನಾಚರಣೆ ಬಗ್ಗೆ ನೃತ್ಯ, ಭಾಷಣ ಸ್ಪರ್ಧೆ ಹಾಗೂ ಯುಗಾದಿ ಹಾಡುಗಳನ್ನು ಮಕ್ಕಳಿಂದ ನಡೆಸಿಕೊಡಲಾಯಿತು. ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.