
ದೆಹಲಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಬೆಳಿಗ್ಗೆ ಎಐಸಿಸಿ ವರಿಷ್ಠರಾದ ಸೋನಿಯಾಗಾಂಧಿ, ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ನವದೆಹಲಿ,ಮೇ೨೬:ದೆಹಲಿಯಲ್ಲಿ ನಡೆದಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಸರತ್ತುಗಳು ಸಂಪೂರ್ಣಗೊಂಡಿದ್ದು, ನಾಳೆ ೨೪ ಸಚಿವರ ಪ್ರಮಾಣವಚನ ಸ್ವೀಕಾರ ನಡೆಯಲಿದೆ.ಸಚಿವರ ಪಟ್ಟಿ ಅಂತಿಮಗೊಂಡಿದ್ದರೂ ಖಾತೆ ಹಂಚಿಕೆಯ ಹಗ್ಗಜಗ್ಗಾಟ ಮುಂದುವರೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಆಪ್ತರಿಗೆ ಪ್ರಬಲ ಖಾತೆಗಳನ್ನು ಕೊಡಿಸಲು ವರಿಷ್ಠರ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ. ಖಾತೆ ಹಂಚಿಕೆಯ ಕಗ್ಗಂಟು ಸಂಜೆಯೊಳಗೆ ಬಗೆಹರಿಯಲಿದೆ ಎಂದು ಹೇಳಲಾಗಿದೆ.ಕಳೆದ ೨ ದಿನಗಳಿಂದ ದೆಹಲಿಯಲ್ಲಿ ಕಾಂಗ್ರೆಸ್ ವರಿಷ್ಠರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿರಂತರ ಸಭೆಗಳನ್ನು ನಡೆಸಿದ ಬಳಿಕ ನೂತನ ಸಚಿವರ ಪಟ್ಟಿ ಅಂತಿಮಗೊಂಡಿದೆ. ಸಂಜೆಯೊಳಗೆ ನೂತನ ಸಚಿವರ ಪಟ್ಟಿಯನ್ನು ಹೈಕಮಾಂಡ್ ಬಿಡುಗಡೆ ಮಾಡಲಿದೆ.ಪೂರ್ಣ ಪ್ರಮಾಣದಲ್ಲಿ ಸಂಪುಟ ರಚಿಸಲು ವರಿಷ್ಠರು ಒಪ್ಪಿಗೆ ನೀಡಿದ್ದು, ಅದರಂತೆ ನಾಳೆ ೨೪ ಸಚಿವರ ಪ್ರಮಾಣವಚನ ನಡೆಯಲಿದೆ.ನೂತನ ಸಚಿವರು ನಾಳೆ ರಾಜಭವನದ ಗಾಜಿನ ಮನೆಯಲ್ಲಿ ನಾಳೆ ಬೆಳಿಗ್ಗೆ ೧೧.೪೫ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದು, ರಾಜ್ಯಪಾಲ ಥಾವರ್‌ಚಂದ್‌ಗೆಲ್ಹೋಟ್ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸುವರು.
ಈ ಮೊದಲು ೨೦ ಸ್ಥಾನಗಳಷ್ಟೇ ಭರ್ತಿ ಮಾಡಿ, ೪ ಸ್ಥಾನಗಳನ್ನು ಖಾಲಿಬಿಡುವ ತೀರ್ಮಾನ ಮಾಡಲಾಗಿತ್ತಾದರೂ ಸಚಿವ ಪಟ್ಟಕ್ಕೆ ಪೈಪೋಟಿ ಹೆಚ್ಚಿದ ಹಿನ್ನೆಲೆಯಲ್ಲಿ ಬಾಕಿ ಇರುವ ಎಲ್ಲ ೨೪ ಸ್ಥಾನಗಳನ್ನು ಭರ್ತಿ ಮಾಡುವ ತೀರ್ಮಾನಕ್ಕೆ ಹೈಕಮಾಂಡ್ ಅಸ್ತು ಎಂದಿದೆ.
ಪಟ್ಟಿ ಅಂತಿಮ, ಖಾತೆಗೆ ಜಟಾಪಟಿ
ಸಚಿವರ ಪಟ್ಟಿ ಬಹುತೇಕ ಅಂತಿಮಗೊಂಡಿದ್ದರೂ ಖಾತೆ ಹಂಚಿಕೆಯ ಸರ್ಕಸ್ ಮುಂದುವರೆದಿದ್ದು, ಪ್ರಬಲ ಖಾತೆಗಳಿಗಾಗಿ ಹಲವು ಹಿರಿಯ ಸಚಿವರು ಪಟ್ಟು ಹಿಡಿದಿದ್ದಾರೆ. ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಆಪ್ತರಿಗೆ ಒಳ್ಳೆಯ ಖಾತೆಗಳನ್ನು ಕೊಡಿಸಲು ಲಾಬಿ ನಡೆಸಿದ್ದಾರೆ. ಹಾಗಾಗಿ, ಖಾತೆ ಹಂಚಿಕೆ ಕಗ್ಗಂಟಾಗಿದ್ದು, ಸಂಜೆಯೊಳಗೆ ವರಿಷ್ಠರು ಖಾತೆ ಹಂಚಿಕೆ ಸರ್ಕಸ್‌ಗೂ ಮುಕ್ತಿ ನೀಡಲಿದ್ದು, ಎಲ್ಲವೂ ಸಂಜೆಯೊಳಗೆ ಬಗೆಹರಿಯಲಿದೆ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ಹೇಳಿವೆ.
ಹಿರಿಯರಿಗೆ ಸ್ಥಾನ ಇಲ್ಲ
ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕೆಲ ಹಿರಿಯರಿಗೆ ಸಚಿವ ಸ್ಥಾನ ಕೈತಪ್ಪುವುದು ನಿಶ್ಚಿತವಾಗಿದ್ದು, ಹಿರಿಯ ಶಾಸಕರಾದ ಆರ್.ವಿ ದೇಶ್‌ಪಾಂಡೆ, ದಿನೇಶ್‌ಗುಂಡೂರಾವ್, ಅಪ್ಪಾಜಿ ನಾಡಗೌಡ, ಟಿ.ಬಿ. ಜಯಚಂದ್ರ, ಬಿ.ಕೆ. ಹರಿಪ್ರಸಾದ್ ಇವರುಗಳಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ. ಆದರೂ ಇವರುಗಳು ಸಚಿವ ಪಟ್ಟಕ್ಕಾಗಿ ಹೈಕಮಾಂಡ್ ಮಟ್ಟದಲ್ಲಿ ತಮ್ಮ ಪ್ರಯತ್ನಗಳನ್ನು ಮುಂದುವರೆಸಿದ್ದಾರೆ.
ಸಂಪುಟದಲ್ಲಿ ಅವಕಾಶ ಸಿಗದ ಹಿರಿಯ ಶಾಸಕರಿಗೆ ಮುಂದೆ ಅವಕಾಶ ನೀಡುವ ಭರವಸೆಯನ್ನು ಹೈಕಮಾಂಡ್ ನೀಡಿದೆ.
ಸಂಭಾವ್ಯ ಸಚಿವರ ಪಟ್ಟಿ
ಈಶ್ವರ ಖಂಡ್ರೆ
ಶಿವಾನಂದ ಪಾಟೀಲ್
ಶರಣ ಬಸಪ್ಪ ದರ್ಶನಾಪುರ
ಎಸ್.ಎಸ್ ಮಲ್ಲಿಕಾರ್ಜುನ
ಡಾ. ಶರಣ್ ಪ್ರಕಾಶ್ ಪಾಟೀಲ್
ಲಕ್ಷ್ಮಿ ಹೆಬ್ಬಾಳ್ಕರ್
ಡಾ. ಹೆಚ್.ಸಿ ಮಹದೇವಪ್ಪ
ಆರ್.ಬಿ ತಿಮ್ಮಾಪುರ
ರುದ್ರಪ್ಪ ಲಮಾಣಿ
ಹೆಚ್.ಕೆ. ಪಾಟೀಲ್
ಪಿರಿಯಾಪಟ್ಟಣ ವೆಂಕಟೇಶ್
ಕೃಷ್ಣ ಭೈರೇಗೌಡ
ಚೆಲುವರಾಯ ಸ್ವಾಮಿ
ಭೈರತಿ ಸುರೇಶ್
ಸಂತೋಷ್ ಲಾಡ್
ರಹೀಂ ಖಾನ್
ಪುಟ್ಟರಂಗಶೆಟ್ಟಿ
ಡಾ. ಎಂ.ಸಿ ಸುಧಾಕರ್ (ಚಿಂತಾಮಣಿ)
ಕೆ.ಎನ್ ರಾಜಣ್ಣ (ಮಧುಗಿರಿ)
ಮಧುಬಂಗಾರಪ್ಪ
ಮಾಂಕಾಳ ಸುಬ್ಬುವೈದ್ಯ
ಶಿವರಾಜ್ ತಂಗಡಗಿ
ಬಿ. ನಾಗೇಂದ್ರ
ಬೋಸ್‌ರಾಜ್