
ಭಾಲ್ಕಿ:ಮಾ.7: 51ನೇ ದಿನದ
ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮ ಸುಮನಬಾಯಿ ಧನರಾಜ ಕಾಕ್ನಾಳೆ ಮೀನಕೆರೆ ಮನೆ ಹತ್ತಿರ ಹಿರೇಮಠ ಗಲ್ಲಿ ಹಳೆ ಭಾಲ್ಕಿ ಅವರ ಮನೆಯಲ್ಲಿ ಜರುಗಿತು. ಕಾರ್ಯಕ್ರಮದ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೆವರ ದಿವ್ಯಸಾನಿಧ್ಯದಲ್ಲಿ ಹಾಗೂ ಪೂಜ್ಯಶ್ರೀ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಿತು. ಪೂಜ್ಯರು ಆಶೀರ್ವಚನ ನೀಡಿದರು. ಕಾಕ್ನಾಳೆ ಪರಿವಾರದವರಿಂದ ಗುರು ಬಸವಪೂಜೆ ನೆರವೇರಿತು ಪ್ರಶಾಂತ ಕಾಕ್ನಾಳೆ ಸ್ವಾಗತಿಸಿದರು. ಬಸವ ಪ್ರಾರ್ಥನೆಯನ್ನು ಮಲ್ಲಮ್ಮ ನಾಗನಕೆರೆ ಹಾಗೂ ನಿರ್ಮಲಾ ತೆಂಕಾಳೆ ಭಾಲ್ಕಿ ಅವರು ನೆರವೇರಿಸಿದರು. ಶ್ರೀದೇವಿ ಶಾಂತಯ್ಯ ಸ್ವಾಮಿ ಭಕ್ತಿಗೀತೆ ಹಾಡಿದರು. ಅನುಭಾವವನ್ನು ಜೈಕಾಂತ ಗಂಗೋಜಿ ಉಪನ್ಯಾಸಕರು ಭಾಲ್ಕಿ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದೇವರ ಜೀವನ ಸಾಧನೆ ಕುರಿತು ಮಾತನಾಡಿದರು. ಅನ್ನದಾಸೋಹ, ಜ್ಞಾನ ದಾಸೋಹ, ಅನುಭವ ಸೇರಿದಂತೆ ಇತರ ಉತ್ಕರ್ಷ ಮಾನವೀಯ ವಿಚಾರ ಕಾರ್ಯಗಳ ಮೂಲಕ ಸಮಾಜದ ಏಳಿಗೆಗೆ ಐದು ದಶಕಗಳಿಂದ ಶ್ರಮಿಸುತ್ತಿರುವ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದೇವರು ರಾಜ್ಯ ಸರ್ಕಾರದ 2019-20 ನೇ ಸಾಲಿನ ಬಸವ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಈಗಿನ ತೆಲಂಗಾಣದ ಮೇದಕ ಜಿಲ್ಲೆಯ ನಾರಾಯಣಖೇಡ ತಾಲೂಕಿನ ನಾಗೂರು ಗ್ರಾಮದ ಭಾಗೀರಥಿ ರಾಜಪ್ಪ ಕಾಡೊದೇ ದಂಪತಿಗಳ ಮಗನಾಗಿದ್ದ ಅವರು 25-8-1950 ರಲ್ಲಿ ಜನಿಸಿದರು. ಅವರನ್ನು ಲಿಂಗೈಕ್ಯ ಮ.ಘ.ಚ. ಡಾ. ಚನ್ನಬಸವ ಪಟ್ಟದೇವರು 1985 ಜೂನ್ ಒಂದರಂದು ಹಿರೇಮಠ ಸಂಸ್ಥಾನ ಭಾಲ್ಕಿಯ ಪಟ್ಟಾಧಿಕಾರಿಯನ್ನಾಗಿ ನೇಮಿಸಿದರು.
ಭಾಲ್ಕಿ ಪಟ್ಟಣದ ಡೊಂಬರಾಟ ಓಣಿಯ 40 ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ತಂದೆ-ತಾಯಿಗೆ ಬೇಡವೆಂದು ತಿಪ್ಪೆಯಲ್ಲಿ ಬಿಸಾಡಿದ 100ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಿ ಮಾತೃ ಪಿತೃ ವಾತ್ಸಲ್ಯ ನೀಡಿ ಬೆಳೆಸಿದ್ದಾರೆ. ಅನಾಥ ಮಕ್ಕಳನ್ನು ಸುದೈವಿ ಶಿಶುಗಳು ಇದು ಕರೆದು ತಮ್ಮ ಜನ್ಮದಿನವನ್ನು ಸುದೈವಿ ಮಕ್ಕಳ ಜನ್ಮದಿನವೆಂದು ಆಚರಿಸುತ್ತಾರೆ ಪ್ರಾಣಿಹತ್ಯೆ ತಡೆದು ನೂರಕ್ಕೂ ಹೆಚ್ಚು ಗೋವುಗಳನ್ನು ಗೋಶಾಲೆಯಲ್ಲಿ ಹಾಕಿದ್ದಾರೆ.
ಶರಣರ ಮೌಲಿಕ ತತ್ವಗಳು ಎಲ್ಲೆಡೆ ಹರಡಲಿ ಎಂಬ ಸದುದ್ದೇಶದಿಂದ ಮಹಾರಾಷ್ಟ್ರ ಆಂಧ್ರಪ್ರದೇಶ ತೆಲಂಗಾಣದಲ್ಲಿ ಬಸವ ಪರಿಷತ್ತು ಆರಂಭಿಸಿ ಮರಾಠಿ ತೆಲುಗು ಹಿಂದಿ ಇಂಗ್ಲಿಷ್ ಭಾಷೆಗಳಲ್ಲಿ ವಚನ ಸಾಹಿತ್ಯವನ್ನು ರಚಿಸಿ ಮಾನವೀಯ ಧರ್ಮ ಪ್ರಸಾರ ಕಾರ್ಯದಲ್ಲಿ ತೊಡಗಿದ್ದಾರೆ. ಈ ಕಾರ್ಯದಲ್ಲಿ ನೆರವಾಗುವ ಅನೇಕ ವ್ಯಕ್ತಿಗಳನ್ನು ಗುರುತಿಸಿ ಶ್ರೀಮಠದಿಂದ ಡಾ. ಚನ್ನಬಸವ ಪಟ್ಟದೇವರು ಪ್ರಶಸ್ತಿಯನ್ನು ಪ್ರತಿವರ್ಷ ಪ್ರಧಾನ ಮಾಡುತ್ತಿದ್ದಾರೆ. ಪೂಜ್ಯರು ಸ್ವತಹ ಮೂವತ್ತಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ, ಮೂರು ಸಂಪಾದಿಸಿದ್ದಾರೆ.
ಹಿರೇಮಠ ಸಂಸ್ಥಾನದ ವಿದ್ಯಾಪೀಠದಡಿ ಒಟ್ಟು 50 ಅಂಗಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟು ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ ಸಾವಿರ ಶಿಕ್ಷಕರು ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷರಾಗಿ ವಚನ ವಿಶ್ವವಿದ್ಯಾಲಯದ ರೂವಾರಿಗಳಾಗಿ ಹಲವು ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ ನಾಡಿನ ಇತರ ಮಠಾಧೀಶರಿಗೆ ಬಸವ ಅನುಯಾಯಿಗಳಿಗೆ ಮಾದರಿಯಾಗಿದ್ದಾರೆ.
ಶ್ರೀಗಳ ಸೇವೆಗೆ ಗುಲಬರ್ಗಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್, ಕಲ್ಯಾಣ ಬಸವಶ್ರೀ ಪ್ರಶಸ್ತಿ ,ರಮಣಶ್ರೀ ಶರಣ ಪ್ರಶಸ್ತಿ ,ಸುವರ್ಣ ಕರ್ನಾಟಕ ಏಕೀಕರಣ ಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ , ಕರ್ನಾಟಕ ರತ್ನ ಪ್ರಶಸ್ತಿ ಸುರಭಿ ಪ್ರಶಸ್ತಿ , ಅಂಬಿಗ ಕುಮಾರ ಚೌಡಯ್ಯ ಪ್ರಶಸ್ತಿ , ಸೇವಾ ಬಂಗಾರ ಪ್ರಶಸ್ತಿ ಲಭಿಸಿವೆ. ಲಿಂಗೈಕ್ಯ ಮ.ಘ.ಚ. ಡಾ. ಚನ್ನಬಸವ ಪಟ್ಟದೇವರ ಸತ್ಯ ಸಂಕಲ್ಪದಂತೆ ಶ್ರೀಗಳು ಸಾಮಾಜಿಕ ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಪೂಜ್ಯರಿಗೆ ಬಸವ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಪೂಜ್ಯ ಶ್ರೀ ಡಾಕ್ಟರ್ ಚನ್ನಬಸವ ಪಟ್ಟದೇವರ ಪ್ರತಿರೂಪವೇ ಪೂಜ್ಯ ಶ್ರೀ ಡಾಕ್ಟರ್ ಬಸವಲಿಂಗ ಪಟ್ಟದೇವರು. ಅವರ ಹೆಜ್ಜೆಯಲ್ಲಿ ಹೆಜ್ಜೆಯನ್ನು ಇಟ್ಟು ಸಮಾಜ ಸೇವೆ ಮಾಡುತ್ತಿದ್ದಾರೆ ಎಂದು ಹೇಳಿದರು. ಶ್ರೀ ಬಸವರಾಜ್ ಮರೆ ಭಾಲ್ಕಿ ನಿರೂಪಿಸಿದರು. ಬಾಲರಾಜ ಕೋಟಗಿರಾ ವಂದನಾರ್ಪಣೆ ಮಾಡಿದರು. ಮಂಗಲ ಹಾಗೂ ಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು ಎಂದು ಶ್ರೀ ಶಾಂತಯ್ಯ ಸ್ವಾಮಿ ತಿಳಿಸಿದರು.