ಪೂಜೆಗೆ ಆಕ್ಷೇಪ, ಅರ್ಜಿ ವಜಾ

ವಾರಣಸಿ,ಫೆ.೨೬- ಉತ್ತರ ಪ್ರದೇಶದ ಜ್ಞಾನವಾಪಿ ಸಂಕೀರ್ಣದ ‘ವ್ಯಾಸ್ ತೆಹ್ಖಾನಾ’ದಲ್ಲಿ ಪೂಜೆ ಸಲ್ಲಿಸಲು ಹಿಂದೂ ಸಮುದಾಯಕ್ಕೆ ನೀಡಿದ್ದ ಅನುಮತಿ ಆದೇಶ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ. ಇದರಿಂದಾಗಿ ಜ್ಞಾನವಾಪಿ ಮಸೀದಿ ಪ್ರಕರಣ ವಿಚಾರದಲ್ಲಿ ಹಿಂದೂಗಳಿಗೆ ಮತ್ತೆ ಗೆಲುವು ಸಿಕ್ಕಂತಾಗಿದೆ.
ಈ ಮೂಲಕ ಜ್ಞಾನವಾಪಿ ಮಸೀದಿಯಲ್ಲಿ ಹಿಂದೂ ದೇವರ ಕುರುಹುಗಳಿದ್ದು ಅಲ್ಲಿ ಪೂಜೆ ಸಲ್ಲಿಸಲು ನ್ಯಾಯಾಲಯದ ತೀರ್ಪು ಹಿಂದೂ ಸಮುದಾಯಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ. ವಾರಣಾಸಿ ಜಿಲ್ಲಾ ನ್ಯಾಯಾಲಯ ಜನವರಿ ೩೧ ರಂದು ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿರುವ ವಿಗ್ರಹಗಳ ಮುಂದೆ ಅರ್ಚಕರು ಪ್ರಾರ್ಥನೆ ಮಾಡಬಹುದು ಎಂದು ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಮಸೀದಿ ಸಮಿತಿ ನ್ಯಾಯಾಲಯದ ಮೊರೆ ಹೋಗಿತ್ತು. ಆ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದ್ದು ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ.
ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ನೇತೃತ್ವದ ನ್ಯಾಯಪೀಠ ತೀರ್ಪು ಪ್ರಕಟಿಸಿದ್ದು. “ಪ್ರಕರಣದ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಿದ ನಂತರ ಮತ್ತು ಸಂಬಂಧಪಟ್ಟ ಕಕ್ಷಿದಾರರ ವಾದಗಳನ್ನು ಪರಿಗಣಿಸಿದ ನಂತರ, ಜಿಲ್ಲಾ ನ್ಯಾಯಾಧೀಶರು ಕಳೆದ ಜನವರಿ ೧ ರಂದು ವಾರಣಾಸಿ ಜಿಲ್ಲಾಧಿಕಾರಿಗಳಿಗೆ ನೀಡಿದ್ದ ಆದೇಶವನ್ನು ಎತ್ತಿ ಹಿಡಿಯಲಾಗಿದೆ ಎಂದಿದ್ದಾರೆ. ಜಿಲ್ಲಾ ನ್ಯಾಯಾಲಯದ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ನ್ಯಾಯಾಲಯ ಯಾವುದೇ ಬಲವಾದ ಕಾರಣ ಕಂಡುಕೊಂಡಿಲ್ಲ. ಆಸ್ತಿಯ ಜನವರಿ ೩೧ ರ ಆದೇಶದ ಮೂಲಕ ಜಿಲ್ಲಾ ನ್ಯಾಯಾಲಯ ತೆಹ್ಖಾನಾದಲ್ಲಿ ಪೂಜೆಗೆ ಅನುಮತಿ ನೀಡಿದ್ದ ಕ್ರಮ ಸರಿಯಾಗಿಯೇ ಎಂದು ತೀರ್ಪಿನಲ್ಲಿ ತಿಳಿಸಿದೆ. “ಜಿಲ್ಲಾ ನ್ಯಾಯಾಧೀಶರ ಆದೇಶದ ವಿರುದ್ಧ ಮುಸ್ಲಿಂ ಕಡೆಯವರು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಧೀಶರು ವಜಾಗೊಳಿಸಿದ್ದಾರೆ . ಪೂಜೆ ಹಾಗೆಯೇ ಮುಂದುವರಿಯುತ್ತದೆ” ಎಂದು ನ್ಯಾಯಾಲಯದ ಆದೇಶದ ನಂತರ ವಕೀಲ ಪ್ರಭಾಷ್ ಪಾಂಡೆ ಹೇಳಿದ್ದಾರೆ.
ಸನಾತನ ಧರ್ಮದ ವಿಜಯ:
ನ್ಯಾಯಾಲಯದ ತೀರ್ಪನ್ನು ‘ಸನಾತನ ಧರ್ಮದ ದೊಡ್ಡ ವಿಜಯ’ ಎಂದು ಕರೆದ ಅವರು, ಮುಸ್ಲಿಂ ಕಡೆಯವರು ನಿರ್ಧಾರದ ಮರುಪರಿಶೀಲನೆಗೆ ಹೋಗಬಹುದು. ಪೂಜೆ ಮುಂದುವರಿಯುತ್ತದೆ” ಎಂದು ತಿಳಿಸಿದ್ದಾರೆ
ಅಲಹಾಬಾದ್ ಹೈಕೋರ್ಟ್ ತೀರ್ಪಿನ ನಂತರ, ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಪ್ರತಿಕ್ರಿಯೆ ನೀಡಿ ಅಲಹಾಬಾದ್ ಹೈಕೋರ್ಟ್ ಅಂಜುಮನ್ ಇಂಟೆಜಾಮಿಯಾ ಆದೇಶದ ಮೊದಲ ಮೇಲ್ಮನವಿ ವಜಾಗೊಳಿಸಿದೆ … ಅವರು ಸುಪ್ರೀಂ ಕೋರ್ಟ್‌ಗೆ ಹೋದರೆ, ನಾವು ಅರ್ಜಿ ಸಲ್ಲಿಸುತ್ತೇವೆ ಎಂದಿದ್ದಾರೆ.
ವಕೀಲ ಹರಿಶಂಕರ್ ಜೈನ್ ಮಾತನಾಡಿ “ಹಿಂದೂಗಳು ಪೂಜೆ ಮಾಡುವ ಹಕ್ಕನ್ನು ಹೈಕೋರ್ಟ್ ಕಾಪಾಡಿಕೊಂಡಿದೆ. ಹಿಂದೂಗಳು ೧೯೯೩ ರವರೆಗೆ ವ್ಯಾಸ್ ತೆಹ್ಖಾನಾದಲ್ಲಿ ಪೂಜೆ ಸಲ್ಲಿಸುತ್ತಿದ್ದರು, ಆದರೆ ಅವರನ್ನು ಕಾನೂನುಬಾಹಿರವಾಗಿ ನಿಲ್ಲಿಸಲಾಯಿತು” ಎಂದು ಹೇಳಿದ್ದಾರೆ.