ಪೂಜೆಗಿಟ್ಟಿದ್ದ ವಜ್ರ-ಚಿನ್ನಾಭರಣ ಕಳವು

ಬೆಂಗಳೂರು,ನ.೧೫-ಬೆಳಕಿನ ಹಬ್ಬ ದೀಪಾವಳಿಯ ಹಿನ್ನೆಲೆಯಲ್ಲಿ ಲಕ್ಷ್ಮೀ ಪೂಜೆಗೆ ಇಟ್ಟಿದ್ದ ವಜ್ರ ಹಾಗೂ ಚಿನ್ನಾಭರಣಗಳನ್ನು ಕಳ್ಳರು ದೋಚಿರುವ ದುರ್ಘಟನೆ ರಾಜರಾಜೇಶ್ವರಿನಗರದಲ್ಲಿ ನಡೆದಿದೆ.
ರಾಜರಾಜೇಶ್ವರಿನಗರದಲ್ಲಿನ ಜವರೇಗೌಡ ನಗರದ ಅಪಾರ್ಟ್‌ಮೆಂಟ್‌ನ ಫ್ಲಾಟ್ ನಲ್ಲಿ ವಾಸಿಸುತ್ತಿದ್ದ ಪ್ರೀತಿ ಎಂಬವರ ಮನೆಯಲ್ಲಿ ಪೂಜೆಗೆ ಇಟ್ಟಿದ್ದ ಚಿನ್ನಾಭರಣ ಕಳ್ಳತನವಾಗಿದೆ.
ಪೂಜೆಗೆ ಇಟ್ಟಿದ್ದ ಒಂದು ಜೊತೆ ಬಳೆ, ಚಿನ್ನದ ಪೆಂಡೆಂಟ್, ಎರಡು ಜೊತೆ ವಜ್ರದ ಸ್ಟಡ್ಸ್, ಚಿನ್ನದ ಮಾಂಗಲ್ಯ ಸರ, ಎರಡು ಜೊತೆ ಚಿನ್ನದ ಕಿವಿ ಓಲೆ ಚಿನ್ನ ಹಾಗೂ ವಜ್ರದ ಓಲೆಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
ಮನೆಯಿಂದ ಹೊರಗೆ ಹೋಗಿ ಬರುವಷ್ಟರಲ್ಲಿ ಕಳ್ಳತನ ನಡೆದಿದೆ. ಆಭರಣ ಕಳ್ಳತನದಿಂದ ಮನೆ ಮಂದಿ ಕಂಗಾಲಾಗಿದ್ದು, ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.ಈ ಸಂಬಂಧ ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.