ಪೂಜಾ ಮಂದಿರಗಳ ತೆರವಿಗೆ ಬ್ರೇಕ್


ಬೆಂಗಳೂರು, ಸೆ. ೧೪- ಸುಪ್ರೀಂ ಕೋರ್ಟ್‌ನ ತೀರ್ಪಿನ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿರುವ ದೇವಸ್ಥಾನಗಳನ್ನು ಏಕಾಏಕಿ ತೆರವುಗೊಳಿಸದಂತೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಹಾಗೂ ಜನರ ಭಾವನೆ ಎರಡನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಬಗ್ಗೆ ಒಂದು ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಅಲ್ಲಿಯವರೆಗೂ ಯಾವುದೇ ದೇವಸ್ಥಾನ, ಮಂದಿರಗಳ ತೆರವು ಮಾಡದಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
೨೦೦೯ ರಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಮುಂದಿಟ್ಟುಕೊಂಡು ಮೈಸೂರು ಜಿಲ್ಲಾಡಳಿತ ಮೈಸೂರಿನಲ್ಲಿ ಸುಮಾರು ೯೦ಕ್ಕೂ ಹೆಚ್ಚು ದೇವಸ್ಥಾನಗಳ ತೆರವಿಗೆ ನೋಟಿಸ್ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸಬೇಕು. ಹಾಗೆಯೇ ಜನರ ಭಾವನೆಗಳನ್ನು ಗಮನದಲ್ಲಿಡಬೇಕಾಗುತ್ತದೆ. ಹಾಗಾಗಿ ಸದ್ಯಕ್ಕೆ ದೇವಸ್ಥಾನಗಳ ತೆರವು ಬೇಡ ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಸರ್ಕಾರದ ಮಟ್ಟದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಸಮಗ್ರವಾಗಿ ಪರಿಶೀಲಿಸಿ ಅದರಲ್ಲಿರುವ ಅಂಶಗಳನ್ನು ಕೂಲಂಕುಷವಾಗಿ ಅಧ್ಯಯನ ಮಾಡಿ ಜನರ ಭಾವನೆಗಳನ್ನು ಗಣನೆಗೆ ತೆಗೆದುಕೊಂಡು ದೇವಸ್ಥಾನ ಮಂದಿರಗಳ ತೆರವಿನ ಸಂಬಂಧ ಸರ್ಕಾರ ಸದ್ಯದಲ್ಲೇ ತೀರ್ಮಾನ ಕೈಗೊಳ್ಳಲಿದೆ ಎಂದರು.
ಸರ್ಕಾರದ ಮಟ್ಟದಲ್ಲಿ ಒಂದು ತೀರ್ಮಾನವಾಗಿ ನಿರ್ದೇಶನ ನೀಡುವವರೆಗೂ ದೇವಾಲಯ, ಮಂದಿರಗಳ ತೆರವು ಬೇಡ ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿಯೂ ಅವರು ಹೇಳಿದರು.
ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ದೇವಸ್ಥಾನವನ್ನು ತೆರವುಗೊಳಿಸಿರುವ ತಹಶೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆ ಎಂಬ ಪ್ರಶ್ನೆಗೆ, ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ವರದಿ ಕೊಡಲು ಸೂಚಿಸಲಾಗುವುದು ಎಂದು ಹೇಳಿದರು.
ಸುಪ್ರೀಂ ಕೋರ್ಟ್ ೨೦೦೯ ರಲ್ಲಿ ನೀಡಿದ್ದ ತೀರ್ಪಿನಂತೆ ಮೈಸೂರು ಜಿಲ್ಲಾಡಳಿತ ಈಗ ಏಕಾಏಕಿ ೯೦ಕ್ಕೂ ಹೆಚ್ಚು ದೇವಾಲಯಗಳ ತೆರವಿಗೆ ನೋಟಿಸ್ ಜಾರಿ ಮಾಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿ, ಮೈಸೂರಿನಲ್ಲಿ ಹಿಂದೂಪರ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ದೇವಸ್ಥಾನಗಳ ತೆರವು ಕಾರ್ಯ ಭಾರೀ ವಿವಾದಕ್ಕೆ ಒಳಗಾಗಿದೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರು ಮೈಸೂರು ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಚರ್ಚಿಸಿದ್ದು, ಸರ್ಕಾರದ ಮಟ್ಟದಲ್ಲಿ ಸ್ಪಷ್ಟ ತೀರ್ಮಾನ ಆಗುವವರೆಗೂ ಯಾವುದೇ ಕ್ರಮ ಬೇಡ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕಾನೂನು ತಜ್ಞರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಏನು ಮಾಡಬಹುದು ಎಂಬ ಬಗ್ಗೆ ಚರ್ಚಿಸಿ, ನಂತರ ಸರ್ಕಾರ ದೇವಾಲಯ, ಮಂದಿರ ತೆರವಿನ ಬಗ್ಗೆ ಒಂದು ತೀರ್ಮಾನ ಮಾಡಲಿದೆ.
ಸಚಿವ ಆರ್. ಅಶೋಕ್ ಅವರ ಸೂಚನೆಯಿಂದ ಸದ್ಯಕ್ಕಂತೂ ದೇವಾಲಯಗಳ ತೆರವು ಕಾರ್ಯಕ್ಕೆ ತಡೆ ಬಿದ್ದಂತಾಗಿದೆ.

ಮೈಸೂರು ಜಿಲ್ಲೆಯ ಹುಣಸೂರು ಹಾಗೂ ಚಾಮರಾಜ ಜಿಲ್ಲೆಯ ನಂಜನಗೂಡಿನಲ್ಲಿ ಹಳೆಯ ದೇವಸ್ಥಾನಗಳನ್ನು ನೆಲಸಮಗೊಳಿಸಿದ ಜಿಲ್ಲಾಡಳಿತ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ದೇವಸ್ಥಾನ ತೆರವು ಕಾರ್ಯಾಚರಣೆಗೆ ತಾತ್ಕಾಲಿಕ ಸ್ಥಗಿತಗೊಳಿಸಿದೆ.
ಹುಣಸೂರು ಹಾಗೂ ನಂಜನಗೂಡು ತಾಲ್ಲೂಕಿನಲ್ಲಿ ನೂರಾರು ವರ್ಷಗಳ ಹಳೆಯ ದೇವಸ್ಥಾನಗಳನ್ನು ಸಂಚಾರಕ್ಕೆ ಅಡಚಣೆ ನೆಪದಲ್ಲಿ ತೆರವುಗೊಳಿಸಲಾಗಿತ್ತು. ಆದರೆ ಜಿಲ್ಲಾಡಳಿತದ ಈ ಕ್ರಮಕ್ಕೆ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಸರ್ಕಾರದ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮೈಸೂರು ಜಿಲ್ಲಾಧಿಕಾರಿ ಸರ್ಕಾರದಿಂದ ನೋಟೀಸ್ ಜಾರಿಯಾಗಿದ್ದು, ಸದ್ಯಕ್ಕೆ ದೇವಾಲಯಗಳ ತೆರವು ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಮುಂದಿನ ಆದೇಶದವರೆಗೆ ದೇವಾಲಯ ತೆರವು ಕಾರ್ಯಾಚರಣೆ ನಡೆಸುವುದಿಲ್ಲ ಎಂದು ಜಿಲ್ಲಾಧಿಕಾರಿ ಗೌತಮ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಬೆಂಗಳೂರು ನಗರ (೭೭) ಸೇರಿದಂತೆ ಬೆಳಗಾವಿ (೧೪೮), ಬಳ್ಳಾರಿ (೩೩), ಮಂಡ್ಯ (೧೩), ಬೀದರ್ (೧೩೮), ಬಿಜಾಪುರ್ (೧೪೧), ಚಾಮರಾಜನಗರ (೧೮), ಚಿಕ್ಕಬಳ್ಳಾಪುರ (೧೮೦), ಚಿಕ್ಕಮಂಗಳೂರು (೩), ಚಿತ್ರದುರ್ಗ (೬೬), ದಕ್ಷಿಣ ಕನ್ನಡ (೮೩೩), ದಾವಣಗೆರೆ (೧೫), ಕೊಪ್ಪಳ (೧೭), ಧಾರಾವಾಡ (೨೨೧), ಗದಗ್ (೧೬), ಗುಲ್ಬರ್ಗ (೧೩೬), ಹಾವೇರಿ (೩೩), ಕೊಡಗು (೨), ರಾಮನಗರ (೩), ರಾಯ್‌ಚೂರ್ (೫೯), ಉತ್ತರಕನ್ನಡ, ಯಾದಗಿರಿ, ತುಮಕೂರು ಸೇರಿದಂತೆ ಒಟ್ಟು ೧೨೬೯ ದೇವಾಲಯಗಳು, ಚರ್ಚ್, ಗುರುದ್ವಾರ್, ಮಸೀದಿಗಳನ್ನು ತೆರವುಗೊಳಿಸಲು ಗುರುತಿಸಲಾಗಿದೆ. ಗೃಹ ಇಲಾಖೆ ಒತ್ತಾಯ ಪೂರ್ವಕವಾಗಿ ಜಿಲ್ಲಾಡಳಿತಕ್ಕೆ ಧಾರ್ಮಿಕ ತೆರವುಗೊಳಿಸುವಂತೆ ಒತ್ತಡ ಹೇರುತ್ತಿದೆ. ಹಾಗೂ ತೆರವುಗೊಳಿಸಿದ ಸಂಬಂಧ ವರದಿ ಸಲ್ಲಿಸುವಂತೆ ಸೂಚಿಸುತ್ತಿರುವುದು. ದೇವಾಲಯ ತೆರವಿಗೆ ಮುಖ್ಯ ಕಾರಣ.

ಸ್ಟೇಟ್ ಆಫ್ ಗುಜರಾತ್/ ಸ್ಟೇಟ್ ಯೂನಿಯನ್/ಎಸ್‌ಎಲ್‌ಪಿ ೮೫-೧೯-೨೦೦೬ ಪ್ರಕರಣದಲ್ಲಿ ದೇವಾಲಯಗಳ ತೆರವು ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟದ್ದು ಜಿಲ್ಲಾಧಿಕಾರಿಗಳು ಪರಿಸ್ಥಿತಿ ಅನುಗುಣವಾಗಿ ದೇವಾಲಯಗಳ ತೆರವುಗೊಳಿಸಬಹುದು, ಸ್ಥಳಾಂತರಿಸಬಹುದು ಅಥವಾ ಅಧಿಕೃತ ಗೊಳಿಸಬಹುದು ಎಂದು ಸೂಚಿಸಲಾಗಿದೆ. ಒಟ್ಟಾರೆ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಡಲಾಗಿದೆ. ಆದರೆ ಜಿಲ್ಲಾಧಿಕಾರಿಗಳು ದೇವಾಲಯಗಳನ್ನು ಪರಿಶೀಲನೆ ನಡೆಸಿದ ನಂತರ ಹಾಗೂ ಸಾರ್ವಜನಿಕರ ಅಭಿಪ್ರಾಯದ ಮೇರೆಗೆ ಮತ್ತು ದೇವಸ್ಥಾನದಿಂದ ಜನಸಾಮಾನ್ಯರಿಗೆ ಯಾವುದೇ ತೊಂದರೆ ಮತ್ತು ಸಂಚಾರಕ್ಕೆ ಅಡಚಣೆಯಿಲ್ಲದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ನಿರ್ಣಯಕ್ಕೆ ಗೃಹ ಇಲಾಖೆ ತಡೆವೊಡ್ಡುತ್ತಿದೆ. ಸರ್ಕಾರ ಎಲ್ಲ ಧರ್ಮಿಯರ ಧಾರ್ಮಿಕ ಭಾವನೆಗಳಿಗೆ ಗೌರವ ನೀಡಿ ದೇವಾಲಯ ತೆರವು ಸ್ಥಗಿತಗೊಳಿಸಿದೆ.
ವೀರಗುಂಡಯ್ಯ ಹಿರೇಮಠ್, ಹಿರಿಯ ವಕೀಲರು.