ಪೂಜಾ ಠಾಕೂರಗೆ ‘ಜಾವಲಿನ್ ಥ್ರೋ’ದಲ್ಲಿ ಚಿನ್ನದ ಪದಕ

ಸಂಜೆವಾಣಿ ವಾರ್ತೆ,
ವಿಜಯಪುರ,ಫೆ.11:ಇಲ್ಲಿನ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಅಧೀನದಲ್ಲಿ ಬರುವ ಕಾಲೇಜುಗಳ 17ನೇ ಅಂತರ್ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿಜಯಪುರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಬಿ.ಎ. 3ನೇ ಸೆಮಿಸ್ಟರ್‍ನ ವಿದ್ಯಾರ್ಥಿನಿ ಪೂಜಾ ಠಾಕೂರ ಜಾವಲಿನ್ ಥ್ರೋ (ಬರ್ಚಿ ಎಸೆತ)ದಲ್ಲಿ 27.33 ಮೀಟರ್ ಎಸೆದು ಬಂಗಾರದ ಪದಕ ಪಡೆದಿರುತ್ತಾಳೆ.
ಕಾಲೇಜಿನ ಇನ್ನೋರ್ವ ಬಿ.ಎ. 3ನೇ ಸೆಮಿಸ್ಟರ್ ವಿದ್ಯಾರ್ಥಿನಿ ದೀಪಾ ಚವ್ಹಾಣ 20 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಕಂಚಿನ ಪದಕದೊಂದಿಗೆ 3ನೇ ಸ್ಥಾನ ಪಡೆದಿರುತ್ತಾಳೆ. ಕಾಲೇಜಿನ ಮತ್ತೋರ್ವ ವಿದ್ಯಾರ್ಥಿನಿ ಲಕ್ಷ್ಮೀ ಕ್ಷತ್ರಿ 1500 ಮೀಟರ್ ಓಟದ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದಿರುತ್ತಾಳೆ.
ಈ ಕ್ರೀಡೆಗಳಲ್ಲಿ ಸಾಧನೆ ಮಾಡಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಕ್ಕಾಗಿ ಈ ಮೂವರು ವಿದ್ಯಾರ್ಥಿನಿಯರನ್ನು ಕಾಲೇಜಿನ ಪ್ರಾಂಶುಪಾಲ ಡಾ. ಆರ್.ಎಸ್. ಕಲ್ಲೂರಮಠ, ದೈಹಿಕ ಶಿಕ್ಷಣ ನಿರ್ದೇಶಕÀ ಡಾ. ರಾಜಶೇಖರ ಬೆನಕನಹಳ್ಳಿ, ಐ.ಕ್ಯೂ.ಎ.ಸಿ. ಸಂಯೋಜಕÀ ಡಾ. ಚಿದಾನಂದ ಎಸ್. ಆನೂರ ಹಾಗೂ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.