ಪೂಂಚ್ ಬಳಿ ಗಣಿ ಸ್ಫೋಟ ಇಬ್ಬರು ಯೋಧರು ಹುತಾತ್ಮ

ಶ್ರೀನಗರ,ಜು.೧೮- ಆಕಸ್ಮಿಕವಾಗಿ ನಡೆದ ಗಣಿ ಸ್ಫೋಟದಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಯೋಧರು ಹುತಾತ್ಮರಾದ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನ ಗಡಿ ಬಳಿ ನಡೆದಿದೆ.
ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಸೈನಿಕರು ಗಡಿಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾಗ ಆಕಸ್ಮಿಕವಾಗಿ ಗ್ರೆನೇಟ್ ಸ್ಫೋಟ ಸಂಭವಿಸಿದೆ.
ಗಾಯಗೊಂಡ ಸೈನಿಕರನ್ನು ತಕ್ಷಣವೇ ಹೆಲಿಕಾಪ್ಟರ್ ಮೂಲಕ ಉಧಂಪುರ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಸೇನಾ ಕ್ಯಾಪ್ಟನ್ ಮತ್ತು ನೈಬ್ ಸುಬೇದಾರ್(ಜೆಸಿಒ) ಅವರು ಮೃತಪಟ್ಟಿದ್ದಾರೆ.
ಈ ನಡುವೆ ನಿನ್ನೆ ನಡೆದ ಭಯೋತ್ಪಾದಕರ ಗುಂಡಿನ ದಾಳಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯೋಧರೊಬ್ಬರು ಹುತಾತ್ಮರಾಗಿರುವ ಘಟನೆ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಗೊಂಗೂ ಕ್ರಾಸಿಂಗ್ ಬಳಿ ನಡೆದಿತ್ತು. ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ಸಿಆರ್‌ಪಿಎಫ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಹುತಾತ್ಮರಾಗಿದ್ದರು.