ಪುಸ್ತಕ ಸಂಸ್ಕøತಿ ಬೆಳೆಸುವಲ್ಲಿ ಪ್ರಕಾಶಕರ ಪಾತ್ರ ಅನನ್ಯ

ಕಲಬುರಗಿ, ಜ.16: ಒಬ್ಬ ವ್ಯಕ್ತಿಯ ಜೀವನದ ದಿಕ್ಕನ್ನೇ ಬದಲಿಸುವ ಶಕ್ತಿ ಪುಸ್ತಕಗಳಿಗಿವೆ. ಇವುಗಳು ಸಾಧನೆಯ ದಾರಿಯನ್ನು ತಿಳಿಸುವ ಮೂಲಕ ಶ್ರೇಷ್ಠ ವ್ಯಕ್ತಿತ್ವ ನಿರ್ಮಾಣ ಮಾಡುವ ಸಾಧನಗಳಾಗಿವೆ. ಎಲ್ಲರಿಗು ಯೋಗ್ಯ ದರದಲ್ಲಿ, ಸೂಕ್ತ ಮಾಹಿತಿಯಿರುವ ಉತ್ತಮ ಪುಸ್ತಕಗಳು ದೊರೆಯಲು, ಲೇಖಕರಿಗೆ ಪ್ರೋತ್ಸಾಹ ನೀಡಿ, ಓದುಗರಿಗೆ ಸೂಕ್ತ ಗ್ರಂಥಗಳು ಲಭ್ಯವಾಗಲು ಪುಸ್ತಕ ಪ್ರಕಾಶಕರು ಬಹಳ ಶ್ರಮಿಸುವ ಮೂಲಕ ಪುಸ್ತಕ ಸಂಸ್ಕøತಿ ಬೆಳೆಸುವಲ್ಲಿ ಅನನ್ಯವಾದ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದು ಸಿದ್ದಲಿಂಗೇಶ್ವರ ಪುಸ್ತಕ ಪ್ರಕಾಶನ ಮುಖ್ಯಸ್ಥ ಬಸವರಾಜ ಕೊನೇಕ್ ಅಭಿಪ್ರಾಯಪಟ್ಟರು.
ನಗರದ ಸರಸ್ವತಿ ಗೋದಾಮದಲ್ಲಿರುವ ಪ್ರಕಾಶನದ ಕಚೇರಿಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಜರುಗಿದ ‘ಪುಸ್ತಕ ಪ್ರಕಾಶಕರ ದಿನಾಚರಣೆ’ಯಲ್ಲಿ ಗೌರವ ಸತ್ಕಾರವನ್ನು ಸ್ವಿಕರಿಸಿ ಅವರು ಮಾತನಾಡುತ್ತಿದ್ದರು.
ಪುಸ್ತಕ ಪ್ರಕಾಶನ ಕಷ್ಟದ ಕೆಲಸವಾಗಿದೆ. ಕಳೆದ ನಾಲ್ಕು ದಶಕಗಳಿಂದ ನಮ್ಮ ಸಂಸ್ಥೆ ಪರಿಶ್ರಮ ವಹಿಸಿ, ನಮ್ಮ ಭಾಗದ ಅನೇಕ ಲೇಖಕರ ಪುಸ್ತಕಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಲಾಗುತ್ತಿದೆ. ಇದಲ್ಲದೆ ನಮ್ಮ ಭಾಗದ ಅನೇಕ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿ ಪಠ್ಯ, ಮಹನೀಯರ ಜೀವನ ಚರಿತ್ರೆ, ಕಥೆ, ಕಾದಂಬರಿ ಸೇರಿದಂತೆ ಎಲ್ಲಾ ವಿಧದ ಪುಸ್ತಕಗಳನ್ನು ದೊರಕಿಸಿಕೊಡುತ್ತಿರುವ ತೃಪ್ತಿ ನನಗಿದೆ. ನಾನು ಯಾವುದೇ ಪ್ರಶಸ್ತಿ-ಪುರಸ್ಕಾರಗಳನ್ನು ಬಯಸದೇ, ನನ್ನ ಕಾಯಕದಲ್ಲಿಯೇ ದೇವರನ್ನು ಕಾಣುವ ಪ್ರವೃತ್ತಿ ನನ್ನದಾಗಿದೆ ಎಂದು ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪ್ರೊ.ಶ್ರೀನಿವಾಸ ವಿ.ಕುಷ್ಟಗಿ ಮಾತನಾಡಿ, ಶ್ರೀಯುತ ಬಸವರಾಜ ಕೊನೇಕ್ ಅವರು ತಮ್ಮ ಪುಸ್ತಕಾಲಯ, ಪ್ರಕಾಶನದ ಮೂಲಕ ಕಳೆದ ಅನೇಕ ವರ್ಷಗಳಿಂದ ಅನನ್ಯವಾದ ಕೊಡುಗೆಯನ್ನು ನೀಡುತ್ತಿದ್ದಾರೆ. ಅವರ ಸಾಧನೆ, ಕೊಡುಗೆಯನ್ನು ಗುರ್ತಿಸಿ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುವುದು ಅತ್ಯಂತ ಔಚಿತ್ಯಪೂರ್ಣವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ನರಸಪ್ಪ ಬಿರಾದಾರ ದೇಗಾಂವ, ಡಾ.ಸುನೀಲಕುಮಾರ ಎಚ್.ವಂಟಿ, ಬಸಯ್ಯಸ್ವಾಮಿ ಹೊದಲೂರ, ಶಿವಯೋಗಪ್ಪ ಬಿರಾದಾರ, ದೇವೇಂದ್ರಪ್ಪ ಗಣಮುಖಿ, ಅಣ್ಣಾರಾಯ ಎಚ್.ಮಂಗಾಣೆ, ರಾಜಕುಮಾರ ಬಟಗೇರಿ, ಶರಣಬಸವ ಕೊನೇಕ್, ಸಿದ್ದಲಿಂಗ ಕೊನೇಕ್, ಶರಣಯ್ಯಸ್ವಾಮಿ, ವಿದ್ಯಾಸಾಗರ ಪಾಟೀಲ, ಸರೋಜಾ ಆಲೂರ್, ಜ್ಯೋತಿ, ಅಂಬಿಕಾ, ಚನ್ನವೀರ, ವೀರೇಶ, ಭಾವನಾ, ನಂದಿನಿ, ಸ್ನೇಹಾ, ಶ್ರಾವಣಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.