
ಕಲಬುರಗಿ,ಫೆ.26: ಕಲ್ಯಾಣ ಕರ್ನಾಟಕದ ರಾಜ ಮನೆತನಗಳು ನಾಡಿನ ಇತಿಹಾಸಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಡಾ. ಅಮರೇಶ ಯತಗಲ್ ಹೇಳಿದರು.
ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಗುಲ್ಬರ್ಗ ವಿಶ್ವವಿದ್ಯಾಲಯದ ಮಹಾತ್ಮಗಾಂಧಿ ಸಭಾಂಗಣದಲ್ಲಿ ಶನಿವಾರ ನಡೆದ ಪುಸ್ತಕ- ಮಾಧ್ಯಮ-ಅಭಿವೃದ್ಧಿ ಹಾಗೂ ಇತಿಹಾಸ ದರ್ಶನ ಕುರಿತ ಗೋಷ್ಠಿ- 9 ಹಾಗೂ 10ನೇ ಗೋಷ್ಠಿಯಲ್ಲಿ ಆಶಯ ಭಾಷಣ ಮಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಕವಿಗಳು, ಅರಸರು ಹಾಗೂ ಕೋಯಿನೂರ್ ವಜ್ರ ಇವೆಲ್ಲವೂ ಬೇರೆಯವರು ಹೈಜಾಕ್ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ಚಾರಿತ್ರಿಕವಾಗಿ, ಸಾಂಸ್ಕøತಿಕ ವಾಗಿ ಬಹಳ ಮಹತ್ದದ ನಾಡಾಗಿದ್ದು, ಬೌದ್ಧ, ಜೈನ, ಸೂಫಿ- ಶರಣರ ಸೌಹಾರ್ದ ನೆಲೆಯಾಗಿದೆ ಎಂದರು.
ಪುಸ್ತಕ ಸಂಸ್ಕೃತಿ ಕುರಿತು ಪಲ್ಲವ ವೆಂಕಟೇಶ ಮಾತನಾಡಿ, ಪುಸ್ತಕ ಸಂಸ್ಕೃತಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಬಂದಿದ್ದು, ಪುಸ್ತಕಗಳು ಸಮಾಜದ ದಿವ್ಯ ಔಷಧಿಗಳಾಗಿವೆ. ಜೀವಪರ ಜನಪರ ಚಳವಳಿಗಳಿಗೆ ಮೂಲ ದ್ರವ್ಯವಾಗಿವೆ ಎಂದು ಹೇಳಿದರು.
ಪುಸ್ತಕ ಸಂಸ್ಕೃತಿ ಇಡೀ ಜಗತ್ತು ಒಂದೇ ಎಂಬ ನೆಲೆಯಲ್ಲಿ ಗ್ರಹಿಸುತ್ತದೆ. ಇದರಿಂದ ಮನುಕುಲದ ಉಳಿವು ಸಾಧ್ಯ. ಪುಸ್ತಕ ಓದಿನಿಂದ ವೈಚಾರಿಕ ಆಕೃತಿ ಮೂಡಿಸುತ್ತವೆ. ವಿದ್ಯಾರ್ಥಿಗಳಲ್ಲಿ ಓದಿನ ಅಭಿರುಚಿ ಹುಟ್ಟಿಸಬೇಕು ಎಂದು ವಿವರಿಸಿದರು.
ರಾಜಮನೆತನಗಳ ಕುರಿತು ಡಾ. ಶಂಭುಲಿಂಗ ವಾಣಿ, ಸೌಹಾರ್ದ ನೆಲೆಗಳ ಕುರಿತು ಡಾ. ಇಂದುಮತಿ ಪಾಟೀಲ, ಬೌದ್ಧ ಜೈನ ನೆಲೆಗಳ ಕುರಿತು ಡಾ. ಎಂ.ಬಿ.ಕಟ್ಟಿ ಪ್ರಬಂಧ ಮಂಡಿಸಿದರು.
ಪತ್ರಕರ್ತ ಶೇಷಮೂರ್ತಿ ಅವಧಾನಿ ಅಧ್ಯಕ್ಷತೆ ವಹಿಸಿದ್ದರು. ಯಶವಂತರಾಯ ಅಷ್ಟಗಿ ನಿರೂಪಿಸಿದರು. ಶಿವರಾಜ ಅಂಡಗಿ ಸ್ವಾಗತಿಸಿದರು.
ನಂತರ ಡಾ. ಡಿ.ಬಿ. ನಾಯಕ ಅಧ್ಯಕ್ಷತೆಯಲ್ಲಿ ಜಾನಪದ ದರ್ಶನ 11ನೇ ಗೋಷ್ಠಿ ನಡೆಯಿತು. ಜಾನಪದ, ಬುಡಕಟ್ಟು, ಶೋಧ, ಸಂಸ್ಕೃತಿ ಕುರಿತು ವಿವಿಧ ವಿದ್ವಾಂಸರು ಪ್ರಬಂಧ ಮಂಡಿಸಿದರು.