ಪುಸ್ತಕ ಬರೆಯುವುದು ಋಷಿತ್ವ ಪಡೆದಂತೆ : ಪ್ರೊ.ವಿಠ್ಠಲ್‍ರಾವ್ ಗಾಯಕ್ವಾಡ್

ಬಳ್ಳಾರಿ ಡಿ.31: ಪುಸ್ತಕ ಬರೆಯುವುದೆಂದರೆ ಋಷಿತ್ವ ಪಡೆದಂತೆ, ಲೇಖಕ, ಬರಹಗಾರ ಅಥವಾ ಕವಿ ಬರೆವಣಿಗೆಯನ್ನು ಮಾಡಬೇಕಾದರೆ ಓದುಗರ ನೆಲೆಯಲ್ಲಿ ನಿಂತು ಅರ್ಥವಾಗುವಂತೆ ತಿಳಿದುಕೊಂಡು ಬರೆವಣಿಗೆಯನ್ನು ಮಾಡಬೇಕೆಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ವಿಭಾಗದ ಪ್ರಾಧ್ಯಾಪಕ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪಶಸ್ತ್ರಿ ಪುರಸ್ಕೃತ ಡಾ.ವಿಠ್ಠಲರಾವ್ ಗಾಯಕ್ವಾಡ್ ಅವರು ಅಭಿಪ್ರಾಯಪಟ್ಟರು.
ಅವರು ಸ್ಥಳೀಯ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜಿನಲ್ಲಿ ಬುಧವಾರ ಬೆಳಿಗ್ಗೆ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಹಮ್ಮಿಕೊಂಡಿದ್ದ “ಮರಣ ಮೃದಂಗ” ಮತ್ತು “ಮನಸ್ಸು ಮಾತಾಡಿದಾಗ” ಎಂಬ ಎರಡು ಪುಸ್ತಕಗಳ ಲೋಕಾರ್ಪಣೆ ಬಿಡುಗಡೆ ಮಾಡಿ ಹಾಗೂ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನಾವು ಕಥೆಗಳಿಲ್ಲದೆ ಬದುಕಲು ಸಾಧ್ಯವಿಲ್ಲ. ಮಕ್ಕಳ ಕಥೆಗಳು ಉತ್ತಮವಾಗಿ ಮೂಡಿಬಂದಿವೆ. ಸಾಹಿತ್ಯವು ಓದುಗರಿಗೆ ಸಹ ಹಿತವನ್ನು ನೀಡುತ್ತದೆ. ಆಧುನಿಕ ಕಾಲದಲ್ಲಿ ಮೊಬೈಲ್ ಸಾಧನವು ಬಂದಿದ್ದು, ಇದನ್ನು ವಿದ್ಯಾರ್ಥಿಗಳು ಸಂಶೋಧನೆಗೆ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಬುದ್ದಿಚಾತುರ್ಯ ಉಪಯೋಗಿಸಿ ಅದರಲ್ಲಿನ ಒಳ್ಳೆಯ ಹಾಡು, ಕಥೆಗಳನ್ನು ಮಾಹಿತಿಯನ್ನು ಸಂಗ್ರಹಿಸಿ ಜ್ಞಾನದ ವಿಸ್ತಾರಕ್ಕೆ ಬಳಸಿಕೊಳ್ಳಬೇಕು. ಮೊಬೈಲನ್ನು ಸಂವಹನದ ಜೊತೆ ಜ್ಞಾನವೃದ್ಧಿಸಿಕೊಳ್ಳಬೇಕೆಂದು ನುಡಿದರು.
ಮರಣ ಮೃದಂಗ ಕೃತಿಯು ಸ್ವಾತಂತ್ರ್ಯ ಹೋರಾಟಗಾರರಿಗೆ ಸಂಬಂಧಿಸಿದ್ದು, ಪ್ರತಿಯೊಬ್ಬ ಹೋರಾಟಗಾರರು ಬೇರೆ ಬೇರೆ ಕಡೆ ಹುತಾತ್ಮರಾಗಿದ್ದಾರೆ. ಗಾಂಧಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಅವರಂತೆ ನಾವಾಗಲು ನಮ್ಮ ಬದುಕನ್ನು ಪರಿಷ್ಕಾರಗೊಳಿಸಬೇಕು. ಗಾಂಧಿ ವ್ಯಕ್ತಿತ್ವವನ್ನು ಅರಿಯದ ಇಂದಿನ ಜನರು ಅವರ ಹೆಸರನ್ನು ಲೇವಡಿ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳನ್ನು ಅರಿಯದೆ ಜವಾಬ್ದಾರಿಯಿಲ್ಲದೆ ನಡೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿ, ನಾವೆಲ್ಲಾ ಈಗ ನವವಸಾಹತುಶಾಹಿ ವ್ಯವಸ್ಥೆಗೆ ಒಗ್ಗಿಕೊಂಡಿದ್ದೇವೆ. ಸ್ವಾತಂತ್ರ್ಯ ಹೋರಾಟದಲ್ಲಿ ಶುಭಶ್ಚಂದ್ರಬೋಸ್‍ರ ಪಾತ್ರವೂ ದೊಡ್ಡದಿದೆ.ಬೋಸ್ ಅವರನ್ನು ಕಂಡರೆ ಬ್ರಿಟಿಷರಿಗೆ ಭಯವಿತ್ತು ಎಂದು ನುಡಿದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಸಿ.ದೇವಣ್ಣ ಅವರು ‘ಮರಣ ಮೃದಂಗ’ ಕೃತಿಯ ಕುರಿತು ಮಾತನಾಡಿದರೆ, ಮನಸ್ಸು ಮಾತಾಡಿದಾಗ ಎಂಬ ಕೃತಿಯನ್ನು ಸಿರುಗುಪ್ಪದ ಸಂಶೋಧನಾ ವಿದ್ಯಾರ್ಥಿ ದಿವಾಕರನಾರಾಯಣ ಪರಿಚಯಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಂಶುಪಾಲರಾದ ಪ್ರೊ.ಎ.ಹೇಮಣ್ಣ ಅವರು ವಿದ್ಯಾರ್ಥಿಗಳು ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷರಾದ ಎನ್.ಯಶವಂತರಾಜ್ ವಹಿಸಿದ್ದರು.
ವೇದಿಕೆಯ ಮೇಲೆ ಲೇಖಕರಾದ ಶಶಿಧರ ಉಬ್ಬಳಗಂಡಿ, ಲಲಿತಕಪ್ಪರಮಠ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಕೋಳೂರು ಚಂದ್ರಶೇಖರಗೌಡ, ಡಾ.ಬಿ.ಆರ್.ಮಂಜುನಾಥ, ರಮೇಶ್‍ಗೌಡ ಪಾಟೀಲ್, ಡಾ.ಇಸ್ಮಾಯಿಲ್‍ಮಕಾಂದರ್, ಶಿವಾನಂದಕಥಕನಹಳ್ಳಿ, ಡಾಕೆ.ಬಸಪ್ಪ, ಡಾ.ಟಿ.ದುರುಗಪ್ಪ, ಷಣ್ಮುಖಯ್ಯ ಸ್ವಾಮಿ, ಇನ್ನಿತರರು ಹಾಜರಿದ್ದರು. ವಿದ್ಯಾರ್ಥಿನಿ ಮಾನಸ ಪ್ರಾರ್ಥಿಸಿದರು. ಕನ್ನಡ ಪ್ರಾಧ್ಯಾಪಕ ನಿಂಗಪ್ಪ ನಿರೂಪಿಸಿದರು. ಡಾ.ತಿಪ್ಪೇರುದ್ರ ಸಂಡೂರು ವಂದಿಸಿದರು.