ಪುಸ್ತಕ ಗೆಳೆತನವೆ ಶ್ರೇಷ್ಠ ಗೆಳೆತನ : ಚನ್ನಬಸವಣ್ಣ ಎಸ್. ಎಲ್.

ಬೀದರ:ಜೂ.23:ಗೆಳೆತನದಲ್ಲಿ ಹಲವಾರು ಪ್ರಕಾರಗಳಿವೆ ಅದರಲ್ಲಿ ಪುಸ್ತಕ ಗೆಳೆತನವು ಶ್ರೇಷ್ಠ ಗೆಳೆತನವಾಗಿದೆ. ಏಕೆಂದರೆ ಪುಸ್ತಕದಿಂದ ನಮಗೆ ಏನೆಲ್ಲ ಸಿಗುತ್ತದೆ. “ವಿದ್ಯೆಯಿಲ್ಲದವನ ಬಾಳು ಹದ್ದಿಗಿಂತಲು ಕೀಳು” ಎನ್ನುವ ಹಾಗೆ ವಿದ್ಯೆಯೇ ನಮ್ಮ ಬಾಳಿನ ಭಾಗ್ಯವಾಗಿದೆ. ಅದು ನಮಗೆ ಒಳ್ಳೆಯ ಪುಸ್ತಕಗಳಿಂದ ಲಭ್ಯವಾಗುತ್ತದೆ ಎಂದು ನಿನ್ನೆ ತಮ್ಮ ಕಚೇರಿ ಆವರಣದಲ್ಲಿ ಉತ್ತಮ ರೀತಿಯಿಂದ ನಡೆಯುತಿದ್ದ ನಗರ ಕೇಂದ್ರ ಗ್ರಂಥಾಲಯ ಶಾಖೆ ಪೊಲೀಸ್ ಗ್ರಂಥಾಲಯಕ್ಕೆ ಸಂದರ್ಶಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಚನ್ನಬಸವಣ್ಣ ಎನ್.ಎಲ್. ಅವರು ಅಲ್ಲಿನ ಮಕ್ಕಳನ್ನು ಕುರಿತು ಬೋಧಿಸಿದರು. ಮುಂದುವರೆದು ಸುಮಾರು ಹತ್ತು ವರ್ಷಗಳಿಂದ ನಮ್ಮ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಈ ಪೊಲೀಸ್ ಗ್ರಂಥಾಲಯವು ಎಲ್ಲ ಬಗೆಯ ಸುಮಾರು 25 ಸಾವಿರಕ್ಕೂ ಹೆಚ್ಚು ಗ್ರಂಥಗಳು ಸದರಿ ಗ್ರಂಥಾಲಯದಲ್ಲಿ ಲಭ್ಯವಿದ್ದು, ಅವುಗಳಲ್ಲಿ ಮಕ್ಕಳಿಗೆ ಸದುಪಯೋಗವಾಗುವ ಉತ್ತಮೋತ್ತಮ ಗ್ರಂಥಗಳೂ ಹೊಂದಿದ್ದು, ಸುಮಾರು ಒಂದುವರೆ ವರ್ಷದಿಂದ ಗ್ರಂಥಾಲಯ ಇಲಾಖೆಯಿಂದ ಇಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಿ ನಮ್ಮ ಇಲಾಖೆಯ ಮಕ್ಕಳ ಓದುಗರಿಗೆ ಮಹದುಪಕಾರ ಮಾಡಿದ್ದಾರೆ.

ವಿಶೇಷವಾಗಿ ಇಲ್ಲಿಯ ಸಿ.ಇ.ಟಿ. ಮಾದರಿಯ ಗ್ರಂಥಗಳು ಮಕ್ಕಳಿಗಾಗಿ ಲಭ್ಯವಾಗಿದ್ದು ಇಲ್ಲಿಯವರೆಗೆ ಈ ಗ್ರಂಥಾಲಯದ ಸದುಪಯೋಗ ಪಡೆದುಕೊಂಡು ಸುಮಾರು 200ರಷ್ಟು ಮಕ್ಕಳು ಸರಕಾರಿ, ಅರೆಸರಕಾಗಿ, ಖಾಸಗಿ ಕಾರ್ಖಾನೆಗಳಲ್ಲಿ ವಿವಿಧ ಹುದ್ದೆಗಳು ಗಿಟ್ಟಿಸಿಕೊಂಡು ತಮ್ಮ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಒಟ್ಟಾರೆ ಇದರ ಬೆಳವಣಿಗೆಗೆ ಕಾರಣಿಕರ್ತರಾದ ನಮ್ಮ ಇಲಾಖೆಯ ಆದರ್ಶ ಪೊಲೀಸ್ ಸಾಹಿತಿ “ಹಂಶಕವಿ”ಯವರ ಸಾಧನೆ ಶ್ಲಾಘನಿಯವಾಗಿದೆ. ಸ್ವತಹ ಉತ್ತಮ ಸಾಹಿತಿಯಾದ ಇವರು ಇಲ್ಲಿಯವರೆಗೆ ಸುಮಾರು ನೂರಾ ಐವತ್ತಕ್ಕೂ ಹೆಚ್ಚು ಗ್ರಂಥಗಳು ಹೊರತಂದಿದ್ದು ಇಂದು ಈ ಗ್ರಂಥಾಲಯವನ್ನು ನಮ್ಮ ಇಲಾಖೆಯಲ್ಲೇ ಒಂದು ಮಾದರಿ ಗ್ರಂಥಾಲಯವನ್ನಾಗಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕೆಲವು ದಿನಗಳಿಂದ ಮಕ್ಕಳ ಓದುವಿಕೆಯನ್ನು ಹೆಚ್ಚಿಸಲು ಗ್ರಂಥಾಲಯದ ಸಮಯವನ್ನು ಮುಂಜಾನೆ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ವಿಸ್ತರಿಸಿ ಮಕ್ಕಳ ಓದುವಿಕೆಗಾಗಿ ಶ್ರಮಿಸುತ್ತಿದ್ದಾರೆ. ಓದುಗರಲ್ಲಿ ಪೊಲೀಸ್ ಇಲಾಖೆಯ ಮಕ್ಕಳೊಂದಿಗೆ ಹೊರಗಿನ ಮಕ್ಕಳೂ ಸೇರಿದ್ದಾರೆ. ಅದೇ ರೀತಿಯಾಗಿ ಪ್ರಥಮ ಬಾರಿಗೆ ಡಿಜಿಟಲ್ ಓದು ಹಾಗೂ ಓದುವ ದಿನವನ್ನು ಇಂದು ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯದವರು ನಮ್ಮ ಕಚೇರಿ ಆವರಣದ ಈ ಗ್ರಂಥಾಲಯದಲ್ಲಿ ಆಚರಿಸುವವರು ಹೆಮ್ಮೆಯ ಸಂಗತಿಯೆಂದರೆ ಎಂದು ನುಡಿದ ಮಾನ್ಯ ವರಿಷ್ಠಾಧಿಕಾರಿಗಳು ಗ್ರಂಥಾಲಯ ಪಿತಾಮಹಾ ಡಾ. ಎಸ್. ಆರ್. ರಂಗನಾಥನ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸದರಿ ಗ್ರಂಥಾಲಯ ಹಾಗೂ ಡಿಜಿಟಲ್ ಗ್ರಂಥಾಲಯವನ್ನು ವೀಕ್ಷಿಸಿ ಇದರ ಅಭಿವೃದ್ಧಿಗಾಗಿ ಎಲ್ಲ ರೀತಿಯಿಂದಲೂ ನಮ್ಮ ಸಹಕಾರವಿದೆ ಎಂದು ನುಡಿದು ಮಕ್ಕಳಿಗೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಸವಿತಾ ಎನ್. ಎಂ. ಮುಖ್ಯ ಗ್ರಂಥಾಲಯಾಧಿಕಾರಿಗಳು ನಗರ ಕೇಂದ್ರ ಗ್ರಂಥಾಳಯ ಬೀದರ ಮತ್ತಿತರರು ಭಾಗವಹಿಸಿದರು.