ಪುಸ್ತಕದ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸಿ

ಕೋಲಾರ.ಏ.೨೪;ವ್ಯಕ್ತಿಯ ಬೌದ್ಧಿಕ ಪ್ರಬುದ್ಧತೆ ಬರುವುದೆ ಪುಸ್ತಕ ಓದುವುದರಿಂದ, ಓದು ನಮ್ಮ ಮನೋವೈಶಾಲ್ಯವನ್ನು ಹೆಚ್ಚಿಸುವ ಬಹುದೊಡ್ಡ ಸಾಧನ. ಈ ಆಧುನಿಕ ಕಾಲದಲ್ಲಿ ಪುಸ್ತಕ ಕುರಿತಾದ ಮಹತ್ವ ಹೆಚ್ಚಿಸಲು ಪುಸ್ತಕದ ಉಳಿವಿಗಾಗಿ ಯುವಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ನಗರಸಭೆಯ ಪೌರಾಯುಕ್ತರಾದ ಆರ್ ಶ್ರೀಕಾಂತ್ ತಿಳಿಸಿದರು.
ನಗರದ ಭಾರತ್ ಸ್ಕೌಟ್ಸ್ ಗೈಡ್ಸ್ ಭವನದಲ್ಲಿ ಜಿಲ್ಲಾ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪುಸ್ತಕ ದಿನಾಚರಣೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತಾನಾಡುತ್ತಿದ್ದರು.
ದೇಶ ಸುತ್ತಿನೋಡು ಕೋಶ ಓದಿನೋಡು ಎನ್ನುವುದು ಪ್ರಚಲಿತವಾದ ಮಾತು. ಜ್ಞಾನ ಸಂಪಾದನೆಗೆ ಅಂದಿನಿಂದ ಇಂದಿನವರೆಗೂ ಪುಸ್ತಕವೇ ಮೂಲ ಆಗಿದೆ. ಪುಸ್ತಕಗಳು ತಮ್ಮ ಮೌಲ್ಯಗಳನ್ನು ಕಳೆದುಕೊಂಡಿಲ್ಲ. ಓದುವುದಕ್ಕೆ ನಮ್ಮಲ್ಲಿ ತಾಳ್ಮೆಯನ್ನು ಬೆಳೆಸುತ್ತದೆ ಎಂದರು.
ಹಿಂದಿನ ಮತ್ತು ಈಗಿನ ಭವಿಷ್ಯದ ಪೀಳಿಗೆ ನಡುವೆ ತಲೆಮಾರುಗಳ ಮತ್ತು ಸಂಸ್ಕೃತಿಗಳ ನಡುವಿನ ಸೇತುವೆಯಾಗಿ ಪುಸ್ತಕಗಳು ನಿಲ್ಲುತ್ತವೆ. ಇದರಿಂದ ಪುಸ್ತಕಗಳ ಜನಪ್ರಿಯತೆ ಸಾಧ್ಯವಾಗುತ್ತದೆ ಎಂದರು.
ಸನ್ಮಾನಿಸಿದ ಸಮಿತಿಯ ಗೌರವಾಧ್ಯಕ್ಷ ಜಿ. ಶ್ರೀನಿವಾಸ್ ಮಾತಾನಾಡಿ ವಿಶ್ವ ಪುಸ್ತಕ ದಿನ ಪುಸ್ತಕ ಪ್ರೇಮಿಗಳು ಸಂಭ್ರಮಿಸುವ ದಿನ. ಓದುವ ಹವ್ಯಾಸ ಇರುವವರು ಇತರರಲ್ಲಿ ಓದುವ ಹಸಿವನ್ನು ಉಂಟುಮಾಡಬೇಕು. ಪುಸ್ತಕ ಓದು ಮನುಷ್ಯನ ಹವ್ಯಾಸವಷ್ಟೆ ಅಲ್ಲ ದೈನಂದಿನ ಕಾಯಕವಾಗಬೇಕು ಎಂದರು.
ಸಮಾರಂಭ ಅಧ್ಯಕ್ಷತೆ ವಹಿಸಿದ ಜಿಲ್ಲಾಧ್ಯಕ್ಷ ಕೆ. ಶ್ರೀನಿವಾಸ್ ಮಾತಾನಾಡಿ ಮನುಷ್ಯನಿಗೆ ಜ್ಞಾನ ಸಂಪಾದನೆ ಜೊತೆಗೆ ಮನುಷ್ಯತ್ವವನ್ನು ಸಾರುವ, ಜ್ಞಾನ ವಿಜ್ಞಾನದೆಡೆಗೆ ಕೊಂಡೊಯ್ಯವ ಸಾಧನವಾಗಿ ಪುಸ್ತಕಗಳು ಕಾರ್ಯ ಮಾಡುತ್ತವೆ. ಈ ದಿಸೆಯಲ್ಲಿ ಜಿಲ್ಲೆಯಾದ್ಯಂತ ಉತ್ತಮ ಸದಸ್ಯತ್ವ ಆಂದೋಲನದಲ್ಲಿ ತಮ್ಮನ್ನು ತೊಡಗಿಸಿಕೊಂಡ ತಾಲ್ಲೂಕು ಅಧ್ಯಕ್ಷರುಗಳಿಗೆ ಸನ್ಮಾನಿಸಿ ಸತ್ಕರಿಸುವುದು ಸಮಿತಿಯ ಒಂದು ಭಾಗವಾಗಿದೆ ಎಂದರು.
ಜಿಲ್ಲಾ ಜ್ಞಾನ ವಿಜ್ಞಾನ ಸಮಿತಿಯ ಸಂಚಾಲಕ ಡಾ. ಶರಣಪ್ಪ ಗಬ್ಬೂರ್ ಮಾತಾನಾಡಿ ಜಿಲ್ಲೆಯ ಉತ್ತಮ ವ್ಯಕ್ತಿತ್ವವನ್ನು ಗುರುತಿಸಿ ಸದಸ್ಯತ್ವ ಪಡೆಯುವ ಕಾರ್ಯ ಮುಂದುವರೆದಿದೆ.ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು. ಇದೇ ಸಂದರ್ಭದಲ್ಲಿ ಸಮಿತಿಯ ಮಾಲೂರಿನ ತಾಲ್ಲೂಕು ಸಮಿತಿಯ ಅಧ್ಯಕ್ಷರಾದ ಪ್ರಮೀಳಾ , ಮುಳುಬಾಗಿಲು ತಾಲ್ಲೂಕು ಸಮಿತಿ ಅಧ್ಯಕ್ಷ ತಾಯಲೂರಪ್ಪ ರವರುಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಜುಳಾ ಕುಸುಮ ಪ್ರತಿಭಾ ಊರ್ಮಿಳಾ ನೇತ್ರಾವತಿ ನಾರಾಯಣಪ್ಪ ರಾಮಚಂದ್ರ ಶಿವರಾಜ್ ನಾರಾಯಣಸ್ವಾಮಿ ನಂಜುಂಡ ಜನಾರ್ದನ ಕೃಷ್ಣಪ್ಪ ಬೈಯಣ್ಣ ಮತ್ತಿತರರು ಉಪಸ್ಥಿತರಿದ್ದರು.