
ಶಹಾಬಾದ್:ಆ.9:ಪುಸ್ತಕ ಸಂಸ್ಕøತಿಯನ್ನು ಪ್ರತಿಯೊಬ್ಬರೂ ರೂಡಿಸಿಕೊಳ್ಳಬೇಕು. ಓದಿನ ಕಿಚ್ಚು ಮತ್ತು ಹುಚ್ಚು ಬೆಳೆಸಿಕೊಂಡವರು ಜೀವನದಲ್ಲಿ ಸಾಧನೆ ಮಾಡಲು ಸಾದ್ಯ. ಜ್ಞಾನಕ್ಕಿಂತ ಮಿಗಿಲಾದ ವಸ್ತು ಈ ಜಗತ್ತಿನಲ್ಲಿ ಯಾವೂದೂ ಇಲ್ಲ ಎಂದು ಚಿಂತಕ ಆರ್.ಕೆ.ಹುಡಗಿ ಹೇಳಿದರು. ಅವರು ರಾವೂರ ಗ್ರಾಮದ ಸಚ್ಚಿದಾನಂದ ಪ್ರೌಢ ಶಾಲೆ ಹಾಗೂ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಓದೋಣ ಪುಸ್ತಕ ಬೆಳೆಸೋಣ ಮಸ್ತಕ ಎಂಬ ವಿಶೇಷ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಮಕ್ಕಳು ಪಾಲಕರಲ್ಲಿ ಹಬ್ಬ ಹರಿದಿನಗಳಂದು ಕಾಡಿ ಬೇಡಿ ಹೊಸ ಬಟ್ಟೆಗಳನ್ನು ಕೊಳ್ಳುವುದರ ಬದಲು ಪುಸ್ತಕ ಕೊಡಿಸಲು ಪಾಲಕರಲ್ಲಿ ಬೇಡಲು ಸಲಹೆ ನೀಡಿದರು. ನಿಮ್ಮ ಖರ್ಚಿನಲ್ಲಿ ಒಂದಿಷ್ಟು ಹಣವನ್ನು ಪುಸ್ತಕ ಖರೀದಿ ಮತ್ತು ಓದಲು ಮೀಸಲಿಡಬೇಕು ಅಂದಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವೆಂದರು. ಓದು ನಮ್ಮ ಹವ್ಯಾಸವನ್ನು ಮತ್ತು ವ್ಯಕ್ತಿತ್ವವನ್ನು ಬದಲಾಯಿಸುತ್ತದೆ. ನಾವು ಏಷ್ಟೇ ದೊಡ್ಡ ಮನೆ ಕಟ್ಟಿದರೂ ಇಲ್ಲಿ ಒಂದೂ ಪುಸ್ತಕವಿಲ್ಲದಿದ್ದರೆ ವ್ಯರ್ಥ. ಮನೆಯಲ್ಲಿ ಪುಸ್ತಕಗಳ ಭಂಡಾರವಿರಬೇಕು ಅಮೂಲಕ ನಿಮ್ಮ ಮಸ್ತಕದ ಭಂಡಾರವು ತುಂಬಬೇಕು ಎಂದು ಹೇಳಿದರು. ಅತಿಥಿಗಳಾಗಿ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರಿ ಸಂಘದ ಅಧ್ಯಕ್ಷ ಅಪ್ಪಾರಾವ ಅಕ್ಕೋಣೆ ಅವರು ಮಾತನಾಡಿ ಶಾಲೆ ಕಾಲೇಜುಗಳಲ್ಲಿ ಮಕ್ಕಳು ಪಠ್ಯವನ್ನು ಹೊರತುಪಡಿಸಿ ಪಠ್ಯೇತರ ಪುಸ್ತಕಗಳನ್ನು ಓದುವುದೇ ಇಲ್ಲ. ಇವತ್ತಿನ ಶಿಕ್ಷಕರಲ್ಲಿ ನೂರಕ್ಕೆ ತೊಂಬತ್ತರಷ್ಟು ಶಿಕ್ಷಕರೂ ಸಹ ಪುಸ್ತಕ ಓದಿನಿಂದ ದೂರವಿದ್ದಾರೆ ಎಂದರು. ನಾವು ಓದಿದಾಗ ಇನ್ನೊಬ್ಬರಿಗೆ ತಿಳಿಸಲು ಸಾದ್ಯ. ಅದ್ದರಿಂದ ಪ್ರತಿಯೊಬ್ಬರೂ ನಿಮಗೆ ಸಿಕ್ಕ ಸಮಯದಲ್ಲಿ ಯಾವುದಾರದೊಂದು ನಿಮ್ಮ ಆಸಕ್ತಿಯ ಪುಸ್ತಕಗಳನ್ನು ಓದಬೇಕೆಂದು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ಡಾ.ಸ್ವಾಮಿರಾವ್ ಕುಲಕರ್ಣಿ ಅವರು ಮಾತನಾಡಿ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದಿಂದ ಈ ಭಾಗದ ಯುವ ಲೇಖಕರ ಕೃತಿ ಬಿಡುಗಡೆ. ಪುಸ್ತಕ ಮಾರಾಟ ಮತ್ತು ಪುಸ್ತ ಓದುವ ಹವ್ಯಾಸವನ್ನು ಬೆಳೆಸಲಾಗುತ್ತಿದೆ. ತಿಂಗಳಿಗೆ ಒಂದು ಶಾಲೆಯಂತೆ ಆಯ್ದುಕೊಂಡು ಅಲ್ಲಿ ಆಸಕ್ತ ವಿಧ್ಯಾರ್ಥಿಗಳಿಗೆ ಪುಸ್ತಕಗಳನ್ನು ನೀಡಿ ಸಾರಾಂಶ ಬರೆಯುವ ಸ್ಪರ್ಧೆ ಏರ್ಪಡಿಸಿ ವಿಜೇತ ಮಕ್ಕಳಿಗೆ ಪುಸ್ತಗಳು ಮತ್ತು ಪ್ರಮಾಣ ಪತ್ರ ನೀಡಲಾಗುತ್ತಿದೆ. ಈ ಸಂಪ್ರದಾಯವನ್ನು ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದೇವೆ. ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವೆಂದರು. ವಿಧ್ಯಾರ್ಥಿ ವೆಂಕಟೇಶ ಹಾಗೂ ವಿಜಯಲಕ್ಷ್ಮಿ ತಮ್ಮ ಅನಿಸಿಕೆ ಹಂಚಿಕೊಂಡರು. ಬಹುಮಾನ ವಿಜೇತ ಮಕ್ಕಳಿಗೆ ಪುಸ್ತಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಪೂಜ್ಯರಾದ ಸಿದ್ಧಲಿಂಗ ಮಹಾಸ್ವಾಮಿಗಳು, ಸಂಸ್ಥೆಯ ಉಪಾಧ್ಯಕ್ಷ ಚೆನ್ನಣ್ಣ ಬಾಳಿ, ಕಾರ್ಯದರ್ಶಿ ಡಾ.ಗುಂಡಣ್ಣ ಬಾಳಿ, ವೇದಿಕೆಯಲ್ಲಿದ್ದರು. ಭುವನೇಶ್ವರಿ ನಿರೂಪಿಸಿದರು. ಸಿದ್ಧಲಿಂಗ ಬಾಳಿ ಸ್ವಾಗತಿಸಿದರು. ಡಾ.ಶರಣಬಸಪ್ಪ ವಡ್ಡನಕೇರಿ ವಂದಿಸಿದರು.