ಪುಸ್ತಕಗಳ ಉಚಿತ ವಿತರಣೆ

ರಾಯಚೂರು,ಏ.೨೫-ಜಗತ್ತನ್ನು ಬೆಳಗಲು ಸೂರ್ಯ ಬೇಕು, ಹಾಗೆ ಮನುಷ್ಯನ ಬದುಕನ್ನು ಬೆಳಗಲು ಪುಸ್ತಕಗಳು ಬೇಕು. ಪುಸ್ತಕವಿಲ್ಲದ ಕೋಣೆ ಹೃದಯ ವಿಲ್ಲದ ದೇಹವಿದ್ದಂತೆ. ಪುಸ್ತಕ ಅಧ್ಯಯನ ಮಾಡದ ಜೀವನ ತೂತು ಬಿದ್ದ ಹಡಗಿನಲ್ಲಿ ಪ್ರಯಾಣ ಮಾಡಿದಂತೆ. ಯಾರೂ ಕದಿಯಲಾರದ ಸಂಪತ್ತು ಎಂದರೆ ಜ್ಞಾನ ಅದರ ಮೂಲವೇ ಪುಸ್ತಕಗಳು ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಶಿಕ್ಷಣ ವಿಭಾಗದ ಜಿಲ್ಲಾ ಸಂಚಾಲಕರು ಹಾಗೂ ಶಾಲಾ ಶಿಕ್ಷಕ ದಂಡಪ್ಪ ಬಿರಾದಾರ್ ಹೇಳಿದರು.
ಅವರು ಏ.೨೩ರ ಶುಕ್ರವಾರ ರಾಯಚೂರು ತಾಲೂಕಿನ ಕುಡುಮಲ್ ಖಾನಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪುಸ್ತಕ ದಿನಾಚರಣೆ ಸಂದರ್ಭದಲ್ಲಿ ಶಾಲಾ ಶಿಕ್ಷಕರಿಗೆ ಹಾಗೂ ಸಿಬ್ಬಂದಿ ಉಚಿತವಾಗಿ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
ದೇಶ ಸುತ್ತಬೇಕು, ಕೋಶ ಓದಬೇಕು, ಎನ್ನುವಂತೆ ಪುಸ್ತಕಗಳ ಅಧ್ಯಯನ ಮಾಡುವುದರಿಂದ ವ್ಯಕ್ತಿಯ ವ್ಯಕ್ತಿತ್ವ ಹಾಗೂ ಜ್ಞಾನ ವಿಕಸನವಾಗುತ್ತದೆ, ಇತ್ತೀಚಿನ ದಿನಗಳಲ್ಲಿ ಟಿವಿ ಮತ್ತು ಮೊಬೈಲ್ ಪ್ರಭಾವದಿಂದಾಗಿ ಪುಸ್ತಕಗಳ ಅಧ್ಯಯನ ಕೊರತೆ ಕಂಡುಬರುತ್ತಿದೆ, ಉತ್ತಮ ಪುಸ್ತಕಗಳು ಉತ್ತಮ ಸ್ನೇಹಿತರಿದ್ದಂತೆ, ಅವುಗಳ ಅಧ್ಯಯನ ಮಾಡಬೇಕು ಎಂದರು.
ಶಾಲೆಯ ವೃತ್ತಿಪರ ವಿಷಯ ಶಿಕ್ಷಕ ಪಾಂಡುರಂಗ ದೇಸಾಯಿ ಮಾತನಾಡಿ, ಶಾಲೆಗೆ ಅಧಿಕಾರಿಗಳು, ವೀಕ್ಷಕರು ಬಂದರೂ ಅವರಿಗೆ ಪುಸ್ತಕ ನೀಡಿ ಸ್ವಾಗತಿಸಲಾಗುತ್ತದೆ, ಪುಸಕ್ತ ನೀಡಿ ಓದಿಗೆ ಹಚ್ಚುವ ಪ್ರವೃತ್ತಿ ಸಮಾಜದಲ್ಲಿ ಹೆಚ್ಚಾಗಬೇಕು ಎಂದರು.
ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಸರಳವಾಗಿ ಮತ್ತು ಸಾಂಕೇತಿಕವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಯಿದ್ದರು, ಅರುಣ್ ಕುಮಾರ ವಂದಿಸಿದರು.