ಪುಸ್ತಕಗಳು ಶ್ರೇಷ್ಠ ವ್ಯಕ್ತಿತ್ವ ನಿರ್ಮಿಸುವ ಸಾಧನಗಳು

ಕಲಬುರಗಿ:ಮೇ.18: ಒಬ್ಬ ವ್ಯಕ್ತಿಯ ಜೀವನದ ದಿಕ್ಕನ್ನೇ ಬದಲಿಸುವ ಶಕ್ತಿ ಪುಸ್ತಕಗಳಿಗಿವೆ. ಇವುಗಳು ಸಾಧನೆಯ ದಾರಿಯನ್ನು ತಿಳಿಸುವ ಮೂಲಕ ಶ್ರೇಷ್ಠ ವ್ಯಕ್ತಿತ್ವ ನಿರ್ಮಾಣ ಮಾಡುವ ಸಾಧನಗಳಾಗಿವೆ. ಆದ್ದರಿಂದ ಅನೇಕ ಚಟಗಳನ್ನು ರೂಢಿಸಿಕೊಂಡು ಹಾಳಾಗುವ ಬದಲು, ಉತ್ತಮವಾದ ಪುಸ್ತಕಗಳನ್ನು ನಿರಂತರವಾಗಿ ಓದುವ ಹವ್ಯಾಸವನ್ನು ಅಳವಡಿಸಿಕೊಂಡರೆ ಬದುಕು ಸುಂದರವಾಗುತ್ತದೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉಪ ನಿರ್ದೇಶಕ ಅಜಯಕುಮಾರ ಡಿ. ಅಭಿಪ್ರಾಯಪಟ್ಟರು.

    ಸಮಾಜ ಸೇವಕ ದಂಪತಿಗಳಾದ ಜಯಶ್ರೀ ಡಾ.ಸುನೀಲಕುಮಾರ ವಂಟಿ ಅವರ 22ನೇ ವಿವಾಹ ವಾರ್ಷಿಕೋತ್ಸವ ಪ್ರಯುಕ್ತ 'ಬಸವೇಶ್ವರ ಸಮಾಜ ಸೇವಾ ಬಳಗ' ಮತ್ತು 'ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ' ಇವುಗಳ ವತಿಯಿಂದ ಗುರುವಾರ ನಗರ ಕೇಂದ್ರ ಗ್ರಂಥಾಲಯಕ್ಕೆ ಸಂವಿಧಾನದ ಪುಸ್ತಕಗಳನ್ನು ದೇಣಿಗೆಯಾಗಿ ಸ್ವೀಕರಿಸಿ, ನಂತರ ಮಾತನಾಡುತ್ತಿದ್ದ ಅವರು, ಇದೊಂದು ಮಾದರಿ ಕಾರ್ಯವಾಗಿದ್ದು, ಅನುಕರಣೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಜ್ಞಾನಕ್ಕಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ. ಇದು ಯಾರಿಂದಲೂ ಕಳ್ಳತನ ಮಾಡಲಾಗದ ಸಂಪತ್ತಾಗಿದೆ. ಇಂತಹ ಅಮೂಲ್ಯವಾದ ಸಂಪತ್ತನ್ನು ಪ್ರತಿಯೊಬ್ಬರು ಪಡೆಯಬೇಕಾದರೆ ಸದಾ ಪುಸ್ತಕಗಳನ್ನು ಓದಬೇಕು. ವಿದ್ಯಾರ್ಥಿ ದೆಸೆಯಿಂದಲೇ ಶ್ರೇಷ್ಠ ಪುಸ್ತಕಗಳನ್ನು ಓದುವ ಹವ್ಯಾಸ ಮೈಗೂಡಿಸಿಕೊಳ್ಳಬೇಕು. ನಾವು ಹೆಚ್ಚು ಓದಿದಷ್ಟು ಅರಿವು ಮತ್ತು ಜ್ಞಾನದ ವ್ಯಾಪ್ತಿ ಹೆಚ್ಚಾಗಿ ವ್ಯಕ್ತಿ, ಶಕ್ತಿಯಾಗುತ್ತಾನೆ. ವಿಶೇಷವಾಗಿ ಯುವಕರು ಉತ್ತಮ ಗ್ರಂಥಗಳ ಅಧ್ಯಯನದತ್ತ ಚಿತ್ತಹರಿಸಬೇಕು. ಸಾರ್ವಜನಿಕ ಗ್ರಂಥಾಲಯಗಳ ಸದುಪಯೋಗವನ್ನು ಮಾಡಿಕೊಳ್ಳಬೇಕು. ಸಂವಿಧಾನದ ಜ್ಞಾನ ಎಲ್ಲರಿಗೂ ಅಗತ್ಯವಾಗಿದ್ದು, ಅಧ್ಯಯನ ಮಾಡಲಿ ಎಂಬ ಉದ್ದೇಶದಿಂದ ಸಂವಿಧಾನದ ಪುಸ್ತಕಗಳನ್ನು ನೀಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಯಶ್ರೀ ಎಸ್.ವಂಟಿ, ಡಾ.ಸುನೀಲಕುಮಾರ ಎಚ್.ವಂಟಿ, ಶಿವಯೋಗಪ್ಪ ಬಿರಾದಾರ, ಬಸವರಾಜ ಎಸ್.ಪುರಾಣೆ ಹಾಗೂ ಗ್ರಂಥಾಲಯದ ಸಿಬ್ಬಂದಿ, ಓದುಗರು ಇದ್ದರು.