ಪುಸ್ತಕಗಳು ಶ್ರೇಷ್ಠ ವ್ಯಕ್ತಿತ್ವ ನಿರ್ಮಿಸುವ ಸಾಧನಗಳು

ಕಲಬುರಗಿ:ನ.21:ಒಬ್ಬ ವ್ಯಕ್ತಿಯ ಜೀವನದ ದಿಕ್ಕನ್ನೇ ಬದಲಿಸುವ ಶಕ್ತಿ ಪುಸ್ತಕಗಳಿಗಿವೆ. ಇವುಗಳು ಸಾಧನೆಯ ದಾರಿಯನ್ನು ತಿಳಿಸುವ ಮೂಲಕ ಶ್ರೇಷ್ಠ ವ್ಯಕ್ತಿತ್ವ ನಿರ್ಮಾಣ ಮಾಡುವ ಸಾಧನಗಳಾಗಿವೆ. ಆದ್ದರಿಂದ ಅನೇಕ ಚಟಗಳನ್ನು ರೂಢಿಸಿಕೊಂಡು ಹಾಳಾಗುವ ಬದಲು, ಉತ್ತಮವಾದ ಪುಸ್ತಕಗಳನ್ನು ನಿರಂತರವಾಗಿ ಓದುವ ಹವ್ಯಾಸವನ್ನು ಅಳವಡಿಸಿಕೊಂಡರೆ ಬದುಕು ಸುಂದರವಾಗುತ್ತದೆಯೆಂದು ಸುಲಫಲ್ ಮಠದ ಪರಮಪೂಜ್ಯ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿಗಳು ಅಭಿಮತ ವ್ಯಕ್ತಪಡಿಸಿದರು.
ಅವರು ನಗರದ ಶಹಾಬಜಾರನಲ್ಲಿರುವ ಸಾರ್ವಜನಿಕ ಗ್ರಂಥಾಲಯದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಏರ್ಪಡಿಸಿದ್ದ ‘ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ’ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಜ್ಞಾನಕ್ಕಿಂತ ದೊಡ್ಡ ಸಂಪತ್ತು ಹಾಗೂ ಶಕ್ತಿ ಬೇರೊಂದಿಲ್ಲ. ಇದು ವ್ಯಕ್ತಿಯನ್ನು ಶಕ್ತಿಯನ್ನಾಗಿಸುತ್ತದೆ. ಯಾರಿಂದಲೂ ಕಳ್ಳತನ ಮಾಡಲಾಗದ ಸಂಪತ್ತಾಗಿದೆ. ಇಂಥಹ ಅಮೂಲ್ಯವಾದ ಸಂಪತ್ತನ್ನು ಪ್ರತಿಯೊಬ್ಬರು ಪಡೆಯಬೇಕಾದರೆ ನಿರಂತರವಾಗಿ ಉತ್ತಮವಾದ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವುದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉಪನಿರ್ದೇಶಕ ಅಜಯಕುಮಾರ ಡಿ.ಮಾತನಾಡಿ, ಪುಸ್ತಕಗಳು ಮನುಷ್ಯನನ್ನು ಸನ್ಮಾರ್ಗದತ್ತ ಸಾಗಿಸುವ ಸಾಧನಗಳಾಗಿವೆ. ಎಲ್ಲರಲ್ಲಿ ಓದುವ ಹವ್ಯಾಸ ಮೂಡಿಸಬೇಕೆಂಬ ಉದ್ದೇಶದಿಂದ ನಗರ ಸೇರಿದಂತೆ ಹೋಬಳಿ, ಗ್ರಾಮೀಣ ಪ್ರದೇಶಗಳಲ್ಲಿ ಗ್ರಂಥಾಲಯಗಳನ್ನು ತೆರೆಯಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಂಥಾಲಯಕ್ಕೆ ಆಗಮಿಸಿ ಪುಸ್ತಕ, ದಿನಪತ್ರಿಕೆಗಳನ್ನು ಅಧ್ಯಯನ ಮಾಡಬೇಕು. ಸದಸ್ಯತ್ವ ಪಡೆಯಬೇಕು. ಗ್ರಂಥಾಲಯಗಳ ಮಹತ್ವ, ಪುಸ್ತಕಗಳ ಅಧ್ಯಯನದ ಅವಶ್ಯಕತೆಯನ್ನು ಜಾಗೃತಿ ಮೂಡಿಸುವ ಸಲುವಾಗಿ ಗ್ರಂಥಾಲಯ ಸಪ್ತಾಹ ಆಚರಿಸಲಾಗುತ್ತದೆಯೆಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ದಾನೇಶ ವಗ್ಗಿ, ಶ್ರೀಕಾಂತ ಬಿರಾದಾರ, ಬಸವರಾಜ ಎಸ್.ಪುರಾಣೆ, ದೀಪಕ ತಿವಾರಿ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಅಮರ ಜಿ.ಬಂಗರಗಿ, ಸಂತೋಷ ಪಾಟೀಲ, ಮಸಣಪ್ಪ ಬೆಳ್ಳಿ, ಶಿವಾನಂದ ಕಲಕೇರಿ, ಪ್ರಭಯ ಕಲಶೆಟ್ಟಿ ಸೇರಿದಂತೆ ಹಲವರಿದ್ದರು.