ಪುಸ್ತಕಗಳು ಜೀವನದ ನಿಜವಾದ ಸಂಗಾತಿಗಳು: ಗಚ್ಚಿನಮನಿ

ಭಾಲ್ಕಿ:ಏ.24: ಪುಸ್ತಕಗಳು ಮಾನವ ಜೀವನದ ನಿಜವಾದ ಸಂಗಾತಿಗಳಾಗಿವೆ ಎಂದು ಗ್ರಂಥಾಲಯ ಸಹಾಯಕ ನಿಂಗಣ್ಣ ಗಚ್ಚಿನಮನಿ ಅಭಿಪ್ರಾಯಪಟ್ಟರು.
ಪಟ್ಟಣದ ಕೇಂದ್ರ ಗ್ರಂಥಾಲಯದಲ್ಲಿ ಮಂಗಳವಾರ ನಡೆದ ವಿಶ್ವ ಪುಸ್ತಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪುಸ್ತಕವಿಲ್ಲದ ಮನೆ ಆತ್ಮವಿಲ್ಲದ ದೇಹದಂತೆ, ಪುಸ್ತಕಗಳೇ ತಮ್ಮ ಜೀವನದ ಸಂಗಾತಿಯನ್ನಾಗಿ ಮಾಡಿಕೊಂಡಿರುವ ಡಾ| ಬಿ.ಆರ್.ಅಂಬೇಡ್ಕರ ರವರು ವಿಶ್ವ ಜ್ಞಾನಿಯಾಗಿ ಹೊರಹೊಮ್ಮಿದ್ದಾರೆ. ಪುಸ್ತಕಗಳು ಸದಾ ಹರಿಯುವ ನದಿಗಳಿದ್ದಂತೆ, ಅವು ಜ್ಞಾನವನ್ನು ಪಸರಿಸುತ್ತವೆ. ವಿದ್ಯಾರ್ಥಿಗಳಲ್ಲದೇ ಎಲ್ಲರೂ ಓದುವ ಹವ್ಯಾಸ ಬೆಳಸಿಕೊಳ್ಳಬೇಕು. ಅಂದಾಗ ಮಾತ್ರ ಉತ್ತಮ ಜೀವನ ಸಾಗಿಸಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಮುಖ್ಯಶಿಕ್ಷಕ ಜಯರಾಜ ದಾಬಶೆಟ್ಟಿ, ಓದುವ ಹವ್ಯಾಸ ಬೆಳಸಿಕೊಂಡು, ಇತರರಿಗೂ ಪುಸ್ತಕ ಓದುವ ಅಭಿರುಚಿ ಬೆಳೆಸಿಕೊಳ್ಳಲು ಸಹಾಯ, ಪ್ರೇರಣೆ ನೀಡಬೇಕು. ಪುಸ್ತಕಗಳು ಜ್ಞಾನದ ಕಣಜಗಳಾಗಿವೆ. ಇಂದಿನ ಇಂಟರನೆಟ್ ಜೀವನದಲ್ಲಿ ಪುಸ್ತಕಗಳು ಓದುವ ಕಾರ್ಯ ಕುಂಠಿತ ಗೊಂಡಿದೆ. ಇದು ದೇಹದ ಆರೋಗ್ಯ ಹಾಗು ಮಾನಸಿಕ ನೆಮ್ಮದಿಗೆ ಸಂಚಕಾರ ತಂದೊಡ್ಡುತ್ತದೆ. ಹೀಗಾಗಿ ಸದಾ ಪುಸ್ತಕ ಓದುವ ರೂಢಿ ಬೆಳೆಸಿಕೊಳ್ಳಬೇಕು. ಮೊಬೈಲ್ ಮತ್ತು ಕಂಪ್ಯೂಟರ್ ನಲ್ಲಿ ಎಸ್ಟೇ ಬಿಡುವಿಲ್ಲದ ಕಾರ್ಯದಲ್ಲಿಯೂ ಸ್ವಲ್ಪ ಪುಸ್ತಕ ಓದುವ ಕಾರ್ಯವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಂಥಾಲಯ ಸಹವರ್ತಿ ಸಿದ್ದರಾಮ ಪೂಜಾರಿ, ಓದುಗರಾದ ಸಚಿನ ಮಾನೆ, ಅವಿನಾಶ ನಾವದಗಿ, ಸಾರ್ವಲೆ ಅಭಿಷೇಕ, ಸುನೀಲ, ಸುಭಾಷ ಮದಕಟ್ಟಿ, ಸಂತೋಷ ಮಾಳಗೆ ಉಪಸ್ಥಿತರಿದ್ದರು.