ಪುಲ್ವಾಮ ದಾಳಿ ಕೈ ಕ್ಷಮೆ ಕೇಳಲಿ


ನವದೆಹಲಿ, ಅ. ೩೦- ಪುಲ್ವಾಮಾ ದಾಳಿಯಲ್ಲಿ ಪಾಕ್ ಕೈವಾಡವಿರುವುದಾಗಿ ಪಾಕ್ ಒಪ್ಪಿಕೊಂಡ ನಂತರ ಕಾಂಗ್ರೆಸ್ ಹಾಗೂ ಇತರರು ಕ್ಷಮೆಯಾಚಿಸಬೇಕೆಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಜಾವೇಡ್‌ಕರ್ ಆಗ್ರಹಿಸಿದ್ದಾರೆ.
೨೦೧೯ರ ಫೆ. ೧೪ ರಂದು ಪುಲ್ವಾಮಾದಲ್ಲಿ ಭದ್ರತಾಪಡೆಗಳ ವಾಹನದ ಮೇಲೆ ಆತ್ಮಾಹುತಿ ಬಾಂಬರ್ ಸ್ಫೋಟಕಗಳಿಂದ ತುಂಬಿದ ಕಾರನ್ನು ನುಗ್ಗಿಸಿ ೪೦ ಸೈನಿಕರು ಸಾವನ್ನಪ್ಪಿದ್ದರು.ಈ ಘಟನೆಗೆ ಸಂಬಂಧಿಸಿದಂತೆ ಮುಸ್ಲಿಂ ಲೀಗ್ ನವಾಜ್, ಶಾಸಕ ಆಯಾಜ್ ಸಾದಿಕ್ ಪ್ರತಿಕ್ರಿಯಿಸಿ ಕಳೆದ ವರ್ಷ ಪಾಕ್ ಯುದ್ಧ ವಿಮಾನವನ್ನು ಹೊಡೆದುರುಳಿಸಿದೆ.ಭಾರತೀಯ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಪಾಕ್ ಆಕ್ರಮಿತ ಪ್ರದೇಶದಲ್ಲಿ ಇಳಿದ ಕಾರಣ ಅವರನ್ನು ಬಂಧಿಸಲಾಗಿತ್ತು.ಈ ವೇಳೆ ಅಭಿನಂದನ್ ಅವರನ್ನು ಬಿಡುಗಡೆ ಮಾಡದಿದ್ದರೆ ಪಾಕ್ ಮೇಲೆ ಭಾರತ ನಡೆಸಬಹುದಾದ ದಾಳಿಯ ಕುರಿತಂತೆ ಪಾಕ್ ಅಸೆಂಬ್ಲಿಯಲ್ಲಿ ಚರ್ಚೆ ಮಾಡಲಾಗಿತ್ತು.ಪಾಕ್ ಮೇಲೆ ದಾಳಿ ನಡೆಸಿರುವುದನ್ನು ಪಾಕ್ ಸಚಿವರು ಒಪ್ಪಿಕೊಂಡಿದ್ದರು.
ಭಾರತವನ್ನು ಗುರಿಯಾಗಿಸುವ ಭಯೋತ್ಪಾದಕ ಗುಂಪುಗಳನ್ನು ನೇರವಾಗಿ ಮತ್ತು ಪರೋಕ್ಷವಾಗಿ ಪಾಕ್ ಬೆಂಬಲಿಸುತ್ತಿದೆ ಎಂದು ಹೇಳಿಕೆ ನೀಡಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್, ಇಂತಹ ದಾಳಿಯಿಂದ ಬಿಜೆಪಿ ಲಾಭಪಡೆದುಕೊಳ್ಳಬಹುದೆಂದು ಟೀಕಿಸಿದ್ದರು.
ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ ಹರಿಪ್ರಸಾದ್ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಪಾಕಿಸ್ತಾನ ಸಹವರ್ತಿ ಇಮ್ರಾನ್ ಖಾನ್ ನಡುವೆ ಭಯೋತ್ಪಾದಕ ದಾಳಿ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ ಹಾಗೂ ಇದು ಉಭಯ ರಾಷ್ಟ್ರ ಪ್ರಧಾನಿಗಳ ಮ್ಯಾಚ್ ಫಿಕ್ಸಿಂಗ್ ಎಂದು ಟೀಕಿಸಿದ್ದರು.
ಈ ಎಲ್ಲ ಘಟನೆಗಳ ನಂತರ ಕಾಂಗ್ರೆಸ್‌ನ ಈ ಹೇಳಿಕೆಯನ್ನು ಖಂಡಿಸಿರುವ ಸಚಿವ ಪ್ರಕಾಶ್ ಜಾವೇಡ್‌ಕರ್ ಕಾಂಗ್ರೆಸ್ ಹಾಗೂ ಇತರರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.