ಪುಲ್ವಾಮದಲ್ಲಿ ಉಗ್ರರಿಬ್ಬರ ಸೆರೆ

ಶ್ರೀನಗರ,ಜೂ.೩-ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನ ಮೂಲದ ಇಬ್ಬರು ಉಗ್ರರು ಸಿಕ್ಕಿಬಿದ್ದಿದ್ದಾರೆ.
ಭಾರತೀಯ ಸೇನೆಯೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಲಷ್ಕರ್-ಎ-ತೊಯ್ಬಾದ ಉಪಶಾಖೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್‌ನ ಇಬ್ಬರು ಟಾಪ್ ಕಮಾಂಡರ್‌ಗಳು ಮನೆಯೊಂದರಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪುಲ್ವಾಮಾದ ನೆಹಮಾ ಪ್ರದೇಶದಲ್ಲಿ ಭಯೋತ್ಪಾದಕರು ಮನೆಯೊಂದರಲ್ಲಿ ಅಡಗಿದ್ದಾರೆ ಎಂಬುದರ ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು, ಗುಂಡಿನ ದಾಳಿ ನಡೆಸಿದ್ದವು. ಈ ವೇಳೆ ಪಾಕ್ ಮೂಲದ ಉಗ್ರರರಿಂದಲೂ ಪ್ರತಿದಾಳಿ ನಡೆದಿದ್ದು, ಕೊನೆಗೆ ಮನೆಯೊಂದರಲ್ಲಿ ಅಡಗಿದ್ದ ಉಗ್ರರು ಸೇನಾ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾರೆ.
ಭಯೋತ್ಪಾದಕರಾದ ರಯೀಸ್ ಅಹ್ಮದ್ ಮತ್ತು ರಿಯಾಜ್ ಅಹ್ಮದ್ ದಾರ್ ಇಬ್ಬರೂ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ನಿವಾಸಿಗಳು ಎಂದು ಸೇನೆ ಖಚಿತಪಡಿಸಿದೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಜಮ್ಮು ಮತ್ತು ಕಾಶ್ಮೀರ ವಲಯದ ಪೊಲೀಸರು, ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರ ಎನ್‌ಕೌಂಟರ್ ಪ್ರಾರಂಭವಾಗಿದೆ.
ಪೊಲೀಸರು ಹಾಗೂ ಭದ್ರತಾ ಪಡೆಗಳು ನಿರಂತರ ಕಾರ್ಯಾಚರಣೆಯಲ್ಲಿವೆ. ಈವರೆಗೆ ಸಾವು ನೋವುಗಳಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.