ಪುರುಷ-ಮಹಿಳೆಯರ ಮಧ್ಯೆ ಸಮಾನತೆ ಬರಲಿ

ಬೆಂಗಳೂರು,ಮಾ.೩೦- ಸಂವಿಧಾನ ಎಲ್ಲರೂ ಸಮಾನರು ಎಂದು ಹೇಳುತ್ತದೆ. ಸಮಾಜದಲ್ಲಿ ಜಾತಿಗಳ ನಡುವೆ ಸಮಾನತೆ ಸಿಕ್ಕಿದರೆ ಸಾಲದು. ಪುರುಷ, ಮಹಿಳೆಯರಲ್ಲೂ ಸಮಾನತೆ ಸಿಗಬೇಕು. ಆಗಮಾತ್ರ ಸಮಾಜದಲ್ಲಿ ಸಮಾನತೆ ಸಿಕ್ಕಿಂದಂತಾಗುತ್ತದೆ ಎಂದು ಶಾಸಕ,ಮಾಜಿ ಸಚಿವ ಕೃಷ್ಣಬೈರೇಗೌಡ ಹೇಳಿದರು.
ಬ್ಯಾಟರಾಯನಪುರ ಕ್ಷೇತ್ರದ ಬೆಟ್ಟಹಲಸೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಮಹಿಳಾ ಸಾಧಕರಿಗೆ ಆಯೋಜಿಸಿದ್ದ ನಮ್ಮೂರು ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿ,ಸಮಾಜದಲ್ಲಿ ಮಹಿಳೆಯರು ಕೂಡಾ ಪುರುಷರಿಗೆ ಸರಿ ಸಮಾನರು ಎಂಬುದನ್ನು ಅರಿತು ಅವರಿಗೂ ಸಮಾನ ಅವಕಾಶ ನೀಡಿದಾಗ ಮಾತ್ರ ಮಹಿಳೆಯರು ಕೂಡಾ ಹೆಚ್ಚೆಚ್ಚು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಮಹಿಳೆಯರು ಮನೆ,ಮಕ್ಕಳು,ಕುಟುಂಬ ನಿರ್ವಹಣೆಯಿಂದ ಹಿಡಿದು ರಾಜಕೀಯ, ಶಿಕ್ಷಣ, ವೈದ್ಯಕೀಯ, ರಕ್ಷಣಾ,ಸಮಾಜಸೇವೆ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಕಾರ್ಯನಿರ್ವಹಿಸಬಲ್ಲರು ಎಂಬುದನ್ನು ಸಾಬೀತು ಮಾಡಿದ್ದಾರೆ. ಅವರಿಗೆ ಹೆಚ್ಚೆಚ್ಚು ಅವಕಾಶಗಳನ್ನು ಕಲ್ಪಿಸಿದರೆ ಇನ್ನೂ ಹೆಚ್ಚಿನ ಸಾಧನೆ ಮಾಡಬಲ್ಲರು ಎಂದರು.
ಸಮಾಜದಲ್ಲಿ ಮಹಿಳೆಯರನ್ನು ಕೇವಲ ಮನೆಕೆಲಸಗಳಿಗೆ ಸೀಮಿತ ಎನ್ನುವ ಮನಸ್ಸುಗಳ ಪರಿವರ್ತನೆ ಆಗಬೇಕು. ಆಲೋಚನೆ ಬದಲಾವಣೆ ಆಗದ ಹೊರತು ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಹೇಳಿದರು.ಇದೇ ವೇಳೆ ಆಶಾಕಾರ್ಯಕರ್ತರು, ಆರೋಗ್ಯ ಇಲಾಖೆ ದಾದಿಯರು,ಸೇರಿದಂತೆ ೫೦ಕ್ಕೂ ಹೆಚ್ಚು ಮಹಿಳಾ ಸಾಧಕರಿಗೆ ಗೌರವ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಮೀನಾಕ್ಷಿ ಕೃಷ್ಣಬೈರೇಗೌಡ, ಬ್ಯಟರಾಯನಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಗೋಪಾಲಗೌಡ,ಬೆಂಗಳೂರು ನಗರ ಜಿಲ್ಲೆ ಕೃಷಿಕ ಸಮಾಜದ ಅಧ್ಯಕ್ಷ ಮಂಜುನಾಥ ಗೌಡ, ಬೆಟ್ಟಹಲಸೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಕುದುರೆಗೆರೆ ಕೃಷ್ಣಮೂರ್ತಿ, ಸದಸ್ಯ ರವೀಂದ್ರ ಸೇರಿ ಇನ್ನಿತರರಿದ್ದರು.