ಪುರುಷರ ಸಮಾನವಾಗಿ ಮಹಿಳೆಯರ ಬೆಳವಣಿಗೆ

ಭಾಲ್ಕಿ:ಮಾ.24:ಪುರುಷ ಪ್ರಧಾನ ಸಮಾಜದಲ್ಲಿ ಹಿಂದಿಗಿಂತಲೂ ಇಂದು ಮಹಿಳೆಯರು ಸಾಕಷ್ಟು ಬೆಳವಣಿಗೆ ಸಾಧಿಸುತ್ತಿರುವುದು ಹೆಮ್ಮೆ ತರಿಸಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಮಲ್ಲಿಕಾರ್ಜುನ ಅಂಬಲಿ ಹೇಳಿದರು.

ಪಟ್ಟಣದ ಪುರಭವನದಲ್ಲಿ ತಾಲೂಕು ಪಂಚಾಯಿತಿ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಮಹಿಳಾ ಮತ್ತು ಮಕ್ಕ ಅಭಿವೃದ್ಧಿ ಇಲಾಖೆ ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯನ್ನು ಶಕ್ತಿ, ಲಕ್ಷ್ಮೀ ದೇವತೆಯನ್ನಾಗಿ ಕಾಣುತ್ತೇವೆ. ಮಹಿಳೆ ತಾಯಿ, ಮಡದಿ, ಸಹೋದರಿಯಾಗಿ ಕುಟುಂಬವನ್ನು ಸಮರ್ಥವಾಗಿ ನಿರ್ವಹಣೆ ಮಾಡುವುದರ ಜತೆಗೆ ಶೈಕ್ಷಣಿಕ, ಸಾಮಾಜಿಕ, ಮಾಹಿತಿ ತಂತ್ರಜ್ಞಾನ ಸೇರಿ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮುಡಿಸಿ ತೊಟ್ಟಿಲು ತೂಗುವ ಕೈಗಳು ದೇಶವನ್ನು ಆಳಬಲ್ಲರು ಎನ್ನುವುದು ತೋರಿಸಿ ಕೊಟ್ಟಿದ್ದಾರೆ.

ಮಹಿಳೆಯರ ರಕ್ಷಣೆಗಾಗಿ ಕಾಯಿದೆ ಕಾನೂನುಗಳಿದ್ದು ಅವುಗಳ ಬಗ್ಗೆ ತಿಳಿದುಕೊಳ್ಳಬೇಕು. ಬಾಲ್ಯ ವಿವಾಹ, ಭ್ರೂಣ ಹತ್ಯೆಯಂತಹ ಪ್ರಕರಣಗಳಿಗೆ ಯಾರು ಅವಕಾಶ ಕೊಡಬಾರದು ಎಂದು ಕಿವಿಮಾತು ಹೇಳಿದರು.

ಕಿರಿಯ ಶ್ರೇಣಿ ನ್ಯಾಯಾಧೀಶ ಆನಂದ ಕೊನ್ನೂರ ಮಾತನಾಡಿ, ಪ್ರತಿ ಪುರುಷನ ಯಶಸ್ವಿ ಹಿಂದೆ ಮಹಿಳೆಯರ ಕೊಡುಗೆ ಇದೆ. ಈ ಸಮಾಜದಲ್ಲಿ ಮಹಿಳೆ ಅಬಲೆ ಅಲ್ಲ ಸಬಲೆ ಎನ್ನುವುದು ತೋರಿಸಿ ಕೊಟ್ಟಿದ್ದಾರೆ ಎಂದು ತಿಳಿಸಿದರು.

ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ ಕೋಸಂಬೆ ಮಾತನಾಡಿ, ತಾಲೂಕಿನಲ್ಲಿ ಬಾಲ್ಯ ವಿವಾಹ ತಡೆಗೆ ಮಹಿಳೆಯರು ಸಂಕಲ್ಪ ಮಾಡಬೇಕು. ಎಲ್ಲೂ ಬಾಲ್ಯ ವಿವಾಹ ನಡೆಯದಂತೆ ಜಾಗೃತಿ ವಹಿಸಬೇಕು. ಅಂತಹ ಪ್ರಕರಣ ಕಂಡು ಬಂದರೆ ಗಮನಕ್ಕೆ ತರಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷೆ ಆರತಿ ತಿವಾರಿ, ತಹಸೀಲ್ದಾರ ಪಿ.ಜಿ.ಪವಾರ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರಜಿಯಾ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕøತೆ, ಮಹಿಳಾ ಸಹಾಯವಾಣಿ ಅಧ್ಯಕ್ಷೆ ಚಿನ್ನಮ್ಮ ಬಾವುಗೆ, ಸೇರಿದಂತೆ ಹಲವರು ಇದ್ದರು. ಶಿಶು ಅಭಿವೃದ್ಧಿ ಇಲಾಖೆ ಸಿಡಿಪಿಒ ಶ್ರೀನಿವಾಸ ಬಾಳವಾಲೆ ಸ್ವಾಗತಿಸಿದರು. ಮೇಲ್ವಿಚಾರಕಿ ಆರತಿ ಮೇತ್ರೆ ನಿರೂಪಿಸಿದರು. ಇದೇ ವೇಳೆ ಘಾಟಬೋರಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಲಕ್ಷ್ಮೀ ಮೇತ್ರೆ ಸೇರಿದಂತೆ ಉತ್ತಮ ಗೌರನ್ವಿತೆ ಕಾರ್ಯಕರ್ತೆಯರನ್ನು ಗುರುತಿಸಿ ಸನ್ಮಾನಿಸಲಾಯಿತು.