ಪುರುಷತ್ವ ಪರೀಕ್ಷೆಯಲ್ಲಿ ಮುರುಘಾ ಶ್ರೀ ಸಮರ್ಥ

ಚಿತ್ರದುರ್ಗ, ನ.5- ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಮಠದ ಡಾ. ಶಿವಾಚಾರ್ಯ ಶಿವಮೂರ್ತಿ ಮುರುಘಾ ಶ್ರೀಗಳಿಗೆ ನಿನ್ನೆ 2 ಗಂಟೆಗಳ ಕಾಲ ನಡೆಸಿದ ಪುರುಷತ್ವ ಪರೀಕ್ಷೆಯಲ್ಲಿ ಲೈಂಗಿಕವಾಗಿ ಸಮರ್ಥರಾಗಿರುವ ವರದಿ ಬಂದಿದೆ.
ನಗರದ ಜಿಲ್ಲಾಸ್ಪತ್ರೆಯಲ್ಲಿ ಶಿವಾಚಾರ್ಯ ಶಿವಮೂರ್ತಿ ಮುರುಘಾ ಶ್ರೀಗಳಿಗೆ ಪುರುಷತ್ವ ಪರೀಕ್ಷೆಯನ್ನು ನಡೆಸಿದ್ದು ಇಂದು ವರದಿ ಬಂದಿದೆ.
ಈ ನಡುವೆ ಹಾಗೇ ಇಂದು ಬೆಳಿಗ್ಗೆ 10:30 ರಿಂದ ಸುಮಾರು 2 ಗಂಟೆಗಳ ಕಾಲ ಮುರುಘಾಮಠದಲ್ಲಿ ಪೊಲೀಸರು ಸ್ಥಳ ಮಹಜರು ಮಾಡಿದರು. ಈ ಸಮಯದಲ್ಲಿ ಮುರುಘಾಶ್ರೀ ಕಚೇರಿ, ಬೆಡ್ ರೂಮ್, ಬಾತ್ ರೂಮ್​ಗೆ ತೆರಳಿ ಸ್ಥಳ ಮಹಜರು ನಡೆಸಲಾಯಿತು. ಸ್ಥಳ ಮಹಜರು ವೇಳೆ ಮುರುಘಾಶ್ರೀ ಬಟ್ಟೆ ಸೇರಿ ಇತರೆ ವಸ್ತುಗಳನ್ನು ವಶಕ್ಕೆ ಪಡೆದ ಪೊಲೀಸರು 2 ಬ್ಯಾಗ್​ಗಳಲ್ಲಿ ತೆಗೆದುಕೊಂಡು ಹೋದರು.
ಮುರುಘಾಶ್ರೀಗಳನ್ನು ಮೂರು ದಿನಗಳಲ್ಲಿ ಸುಮಾರು 12ಕ್ಕೂ ಹೆಚ್ಚು ತಾಸುಗಳ ಕಾಲ ವಿಚಾರಣೆ ನಡೆಸಲಾಗಿದೆ. ಈ ವೇಳೆ ಎಸ್ಪಿ ಕೆ. ಪರಶುರಾಮ್, ಸಿಪಿಐ ಬಾಲಚಂದ್ರ ನಾಯ್ಕ್ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಮಠದಲ್ಲಿ ಸ್ಥಳ ಮಹಜರು ಬಳಿಕ ಪೊಲೀಸರು ಮತ್ತೆ ಮೆಡಿಕಲ್‌ ಚಕ್​ಅಪ್ ಮಾಡಿಸಿ ಡಿವೈಎಸ್ಪಿ ಕಚೇರಿಗೆ ಕರೆದುಕೊಂಡು ಹೋದರು. ಕೆಲ ಹೊತ್ತು ವಿಶ್ರಾಂತಿ ಬಳಿಕ ಮಧ್ಯಾಹ್ನದ ಊಟಕ್ಕೆ ಚಪಾತಿ ನೀಡಲಾಗಿದೆ. ಬಳಿಕ ಮದ್ಯಾನ 3:30ಕ್ಕೆ ಪೊಲೀಸರು ಮುರುಘಾಶ್ರೀಗಳನ್ನು ಕೋರ್ಟ್​ಗೆ ಕರೆತಂದರು. 4ಗಂಟೆಗೆ ಜಡ್ಜ್ ಎದುರು ಹಾಜರು ಪಡಿಸಿದಾಗ 1ನೇ ಫೋಕ್ಸೋ ಕೇಸಲ್ಲಿ ನವೆಂಬರ್ 3ರಂದು ನೀಡಿದ್ದ ಆದೇಶವನ್ನೇ ಪಾಲಿಸುವಂತೆ ಸೂಚನೆ ನೀಡಿದರು. ನವೆಂಬರ್ 8 ರವರೆಗೆ ನ್ಯಾಯಾಂಗ ಬಂಧನ ಆದೇಶ ಹಿನ್ನೆಲೆ ಜಿಲ್ಲಾ ಕಾರಾಗೃಹಕ್ಕೆ ಮುರುಘಾಶ್ರೀಗಳನ್ನು ಪೊಲೀಸರು ಕರೆತಂದರು.
ಮುರುಘಾಶ್ರೀ ವಿರುದ್ಧ ಗಂಭೀರ ಪ್ರಕರಣಗಳು ದಾಖಲಾಗಿವೆ. ಹೀಗಾಗಿ, ಪೊಲೀಸರು ಬಂಧನದಲ್ಲಿರುವ ಮುರುಘಾಶ್ರೀ ಬಾಡಿ ವಾರೆಂಟ್ ಪಡೆದು ಮೂರು ದಿನ ವಿಚಾರಣೆ ನಡೆಸಿದ್ದಾರೆ. ಇನ್ನುಳಿದ ಆರೋಪಿಗಳನ್ನು ಪೊಲೀಸ್​ರ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ. ಮುರುಘಾಶ್ರೀಗೆ ಸದ್ಯಕ್ಕೆ ಜೈಲೇ ಗತಿ ಆಗಿದೆ.