ಪುರಾತನ ವಸ್ತುಗಳ ಮಾರಾಟ ಖದೀಮನ ಸೆರೆ

ಬೆಂಗಳೂರು,ನ. ೧೨- ವನ್ಯ ಜೀವಿಗಳಿಗೆ ಸಂಬಂಧಿಸಿದ ಪ್ರಾಚೀನ ತಾಮ್ರದ ಪ್ಲೇಟು, ಜರ್ಮನ್ ಸಿಲ್ವರ್ ಸೌಟು, ಯು ಬೋಟ್ ಪುಸ್ತಕ ಮಾರಾಟ ಮಾಡುತ್ತಿದ್ದ ಖದೀಮನೊಬ್ಬನನ್ನು ಬಂಧಿಸಿರುವ ಕಾಡಿಗೊಂಡನ ಹಳ್ಳಿ ಪೊಲೀಸರು ೧ ಕೋಟಿ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.


ಯಲಹಂಕದ ಕಟ್ಟಿಗೇನಹಳ್ಳಿಯ ಆರ್ಯನ್‌ಖಾನ್ (೩೨) ಬಂಧಿತ ಆರೋಪಿಯಾಗಿದ್ದಾನೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ. ಶರಣಪ್ಪ ಅವರು ತಿಳಿಸಿದ್ದಾರೆ.
ಆರೋಪಿಯಿಂದ ಪುರಾತನ ಮಿಲ್ಕ್ ಜಗ್, ಟೀ ಪಾಟ್, ಶುಗರ್ ಸ್ಪ್ರೇಯರ್, ಜರ್ಮನ್ ಸಿಲ್ವರ್ ಸೌಟು, ಆಫ್ರಿಕನ್ ಆರ್ಟ್‌ವುಡ್ಸ್ ಫೋನ್, ಆನೆ ಕಾಲಿನ ಪಾದವನ್ನು ಮೇಲ್ಭಾಗದಿಂದ ಮುಚ್ಚಲು ಬಳಸುವ ತಾಮ್ರದ ಪ್ಲೇಟ್ ಸೇರಿ ೧ ಕೋಟಿ ಮೌಲ್ಯದ ಪುರಾತನ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯು ಕಾಡುಗೊಂಡನಹಳ್ಳಿಯ ಬಿಡಿಎ ಕಾಂಪ್ಲೆಕ್ಸ್ ಹಿಂಭಾಗದ ರಸ್ತೆಯಲ್ಲಿ ವನ್ಯ ಜೀವಿಗಳಿಗೆ ಸಂಬಂಧಿಸಿದ ಹಳೆಯ ಕಾಲದ ಬೆಲೆ ಬಾಳುವ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯಾಧರಿಸಿದ ಇನ್ಸ್‌ಪೆಕ್ಟರ್ ಜಗದೀಶ್ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನುಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿಯು ಅನಾರೋಗ್ಯಕ್ಕೊಳಗಾಗಿದ್ದ ಅಣ್ಣನ ಮಗನ ವೈದ್ಯಕೀಯ ಚಿಕಿತ್ಸೆ ಗೆ ಹಾಗೂ ಮನೆ ಬಾಡಿಗೆ ಕಟ್ಟಲು, ಸಾಲ ತೀರಿಸಲು ಪ್ರಾಚೀನ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ತನಿಖೆಯಲ್ಲಿ ಕಂಡು ಬಂದಿದೆ. ಆರೋಪಿಯಿಂದ ವಶಪಡಿಸಿಕೊಂಡ ಆನೆಯ ದಂತದಿಂದ ಮಾಡಲ್ಪಟ್ಟ ಶೂ ರಿಮೂವರ್ ಮತ್ತು ಇನ್ನಿತರ ಪ್ರಾಚೀನ ವಸ್ತುಗಳಿಗೆ ಅಪಾರ ಬೇಡಿಕೆ ಇರುವುದು ಕಂಡು ಬಂದಿದೆ ಎಂದು ಅವರು ತಿಳಿಸಿದರು.