
ಧಾರವಾಡ,ಜು29: ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯುಳ್ಳ ನಮ್ಮ ಪುರಾತನ ದೇವಾಲಯಗಳ ಸಂಸ್ಕøತಿಯ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನ ಮಾಡಬೇಕು ಎಂದು ಖ್ಯಾತ ವಾಸ್ತುಶಿಲ್ಪಿ ರೇಖಾ ಶೆಟ್ಟರ ಹೇಳಿದರು.
ಅವರು ಉತ್ತರ ಕರ್ನಾಟಕ ಲೇಖಕಿಯರ ಸಂಘದಿಂದ ಹಮ್ಮಿಕೊಂಡ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಧಾರವಾಡದ ದೇಗುಲಗಳ ಕುರಿತು ಮಾತನಾಡಿ, ಯುವ ಜನಾಂಗಕ್ಕೆ ಐತಿಹಾಸಿಕ ದೇಗುಲಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಮೂಡಿಸಬೇಕು ಎಂದರು.
ಪ್ರಾಚಾರ್ಯರಾದ ಡಾ ಕರಡೋಣಿ ಮಾತನಾಡಿ, ಚರಿತ್ರೆಯನ್ನು ಪುನರ್ ಸೃಷ್ಟಿಸುವುದರಲ್ಲಿ ನಮ್ಮ ವಿದ್ಯಾರ್ಥಿಗಳು ಮತ್ತು ಯುವ ಸಮಾಜ ಆಸಕ್ತಿವಹಿಸಬೇಕು ಎಂದರು.
ಲೇಖಕಿಯರ ಅಧ್ಯಕ್ಷೆ ಡಾ. ರಾಜೇಶ್ವರಿ ಮಹೇಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು. ದತ್ತಿ ದಾನಿ ಲಲಿತಾ ಕೆರಿಮನಿ, ಉತ್ತರ ಕರ್ನಾಟಕ ಲೇಖಕಿಯರ ಸಂಘ ನಡೆದು ಬಂದ ಹಾದಿಯನ್ನು ಸ್ಮರಿಸಿದರು. ಲೇಖಕಿಯರ ಸಂಘವು ಸದಾ ಅನೇಕ ಅರ್ಥ ಪೂರ್ಣ ವಿಚಾರ ಸಂಕಿರಣಗಳು, ಕಮ್ಮಟಗಳು, ಸಾಹಿತ್ಯ ಗೋಷ್ಠಿಗಳನ್ನು ನಡೆಸುತ್ತಾ ಮಹಿಳೆಯರಲ್ಲಿ ಸಾಹಿತ್ಯಾಸಕ್ತಿಯನ್ನು ಬೆಳೆಸುವ ಕಾರ್ಯವನ್ನು ಮಾಡುತ್ತಾ ಬಂದಿದೆ ಎಂದು ಶ್ಲಾಘಿಸಿದರು.
ಡಾ ವಿ. ಶಾರದಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಮಾಜ ಸೇವಕಿ ಅಪರ್ಣಾ ಅವರನ್ನು ಸತ್ಕರಿಸಲಾಯಿತು. ಡಾ ಪ್ರಜ್ಞಾ ಮತ್ತಿಹಳ್ಳಿ ಸ್ವಾಗತಿಸಿದರು. ಮೇಘಾ ಹುಕ್ಕೇರಿ ಪರಿಚಯಿಸಿದರು. ನೀತಾ ಮೂರಶಿಳ್ಳಿ ನಿರೂಪಿಸಿದರು. ಉಷಾ ಗದ್ದಗಿಮಠ ವಂದಿಸಿದರು.