ಪುರಾತತ್ವ ಅಧ್ಯಯನವು ಕಲೆ ಮತ್ತು ವಿಜ್ಞಾನಗಳ ಸಮ್ಮಿಲನ : ಡಾ.ಎನ್.ಎಸ್. ರಂಗರಾಜು


ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ5: ಪುರಾತತ್ವ ಅಧ್ಯಯನವು ಕಲೆಯೂ ಹೌದು, ವಿಜ್ಞಾನವೂ ಹೌದು, ಇದು ಕಲಾ ವಿಭಾಗದಿಂದ ರಾಜ್ಯಶಾಸ್ತ್ರ, ಭೂಗೋಳ ಶಾಸ್ತ್ರ, ಮಾನವಶಾಸ್ತ್ರ, ಸಮಾಜಶಾಸ್ತ್ರ ವಿಷಯಗಳು ಮತ್ತು ವಿಜ್ಞಾನ ವಿಭಾಗದಿಂದ ಭೌತಶಾಸ್ತ್ರ, ಸಸ್ಯಶಾಸ್ತ್ರ, ಜೀವಶಾಸ್ತ್ರ, ಪ್ರಾಣಿಶಾಸ್ತ್ರ ವಿಷಯಗಳ ಸಂಯೋಗ ಎಂದು ಮೈಸೂರು ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಎನ್.ಎಸ್. ರಂಗರಾಜು ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ, ಉನ್ನತ ಶಿಕ್ಷಣ ಸಚಿವಾಲಯ ಭಾರತ ಸರ್ಕಾರ ಮಾನಸ ಗಂಗೋತ್ರಿ, ಮೈಸೂರು, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಭಾರತೀಯ ಭಾಷಾ ಸಂಸ್ಥಾನ ಮೈಸೂರು ಇವರ ಸಹಯೋಗದಲ್ಲಿ ಕರ್ನಾಟಕದಲ್ಲಿ ಪುರಾತತ್ವ ಅಧ್ಯಯನ ಪ್ರಾರಂಭಿಕ ಪ್ರಯತ್ನಗಳು ಹಮ್ಮಿಕೊಂಡಿದ್ದ ಪ್ರಚಾರೋಪನ್ಯಾಸ ಮಾಲೆ 2023-24 ಉದ್ಘಾಟಿಸಿ ಮಾತನಾಡಿದರು. ಪುರಾತತ್ವ ಅಧ್ಯಯನವು ಉತ್ಖನನ, ಭೂಪರಿಶೋಧನೆ, ಶಾಸನಶಾಸ್ತ್ರ, ನಾಣ್ಯಶಾಸ್ತ್ರ, ದೇವಾಲಯ ಕಲೆ ಮತ್ತು ವಾಸ್ತುಶಿಲ್ಪ ಅಧ್ಯಯನ ಎಂಬ ಐದು ಭಾಗಗಳನ್ನು ಒಳಗೊಂಡಿದೆ.  ಕರ್ನಾಟಕದಲ್ಲಿ  ರಾರ್ಬಟ್ ಬ್ರೂಸ್ ಅವರು ಮೊದಲು ಕ್ಷೇತ್ರ ಕಾರ್ಯವನ್ನು ಆರಂಭಿಸುತ್ತಾರೆ. ಮಡಿಕೇರಿಯಲ್ಲಿ ಮೊದಲ ಬಾರಿಗೆ ಕುತೂಹಲಕ್ಕಾಗಿ ಕ್ಯಾಪ್ಟನ್ ಕೋಲೆ ಅವರು ಉತ್ಖನನ ಮಾಡಿದರು. ಶಾಸನಶಾಸ್ತ್ರ ವಿಭಾಗದಲ್ಲಿ ಬಿ.ಎಲ್. ರೈಸ್ ರವರ ಕೊಡುಗೆ ಅಪಾರ. ಪರ್ಶಿಬ್ರೌನ್ ರವರು ಪ್ರಾರಂಭದಲ್ಲಿ ಕಲೆ ಮತ್ತು ವಾಸ್ತುಶಿಲ್ಪ ವಿಭಾಗದಲ್ಲಿ ಹಿಂದೂ-ಬೌದ್ಧ ಶೈಲಿ ಹಾಗೂ ಇಸ್ಲಾಮಿಕ್ ಶೈಲಿಯನ್ನು ವಿಗಂಡಿಸುವಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ ಪುರಾತತ್ವ ಅಧ್ಯಯನಕ್ಕೆ ಸಂಬಂಧಪಟ್ಟ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುವುದು ಇಂದಿನ ಯುವ ಸಂಶೋಧಕರ ಜವಾಬ್ದಾರಿ ಎಂದರು.
ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ನಿರ್ದೇಕರಾದ ಡಾ.ಎನ್.ಎಂ. ತಳವಾರ್ ಅವರು ಮಾತನಾಡುತ್ತ 2008ರಲ್ಲಿ ಕೇಂದ್ರ ಸರ್ಕಾರ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನವನ್ನು ನೀಡಿತು. ಮೈಸೂರಿನಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಆರಂಭವಾಯಿತು. ಈಗಾಗಲೇ ಈ ಕೇಂದ್ರವು 8 ಪುಸ್ತಕಗಳನ್ನು ಪ್ರಕಟಿಸಿದೆ. 5 ಪುಸ್ತಕಗಳು ಪ್ರಕಟಣೆಗೆ ಸಿದ್ದವಾಗಿವೆ. ಭಾರತ ಪರಂಪರೆಯ ರತ್ನಗಣಿ. ಇದರ ಬಗ್ಗೆ ಜನರಲ್ಲಿ ನೈಜ ತಿಳುವಳಿಕೆ ಮೂಡಿಸುವುದೇ ನಮ್ಮ ಕೇಂದ್ರದ ಆಶಯ ಎಂದು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ಡಿ.ವಿ. ಪರಮಶಿವಮೂರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತ ಪುರಾತತ್ವ ಅಧ್ಯಯನವು ಬ್ರಿಟಿಷರಿಂದ ಆರಂಭವಾಯಿತು. ಇಡೀ ಭಾರತದಲ್ಲಿ ಪುರಾತತ್ವದ ಅಧ್ಯಯನ ಹೆಚ್ಚಾಗಿ ನಡೆದಿರುವುದು ಕರ್ನಾಟಕದಲ್ಲಿ. ಕನ್ನಡ ಸಾಹಿತ್ಯದ ಕೆಲವು ಕಡೆಗಳಲ್ಲಿ ಉತ್ಖನನದ ವಿಚಾರಗಳು ಬರುತ್ತವೆ. ಆ ಕಾಲದಲ್ಲೇ ಉತ್ಖನನದ ಬಗ್ಗೆ ಜನರಲ್ಲಿ ಪ್ರಜ್ಞೆಯಿತ್ತು ಎಂಬುದನ್ನು ವಚನ ಸಾಹಿತ್ಯದಲ್ಲಿ ನಾವು ನೋಡಬಹುದು ಎಂದು ಹೇಳಿದರು.
ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ವಾಸುದೇವ ಬಡಿಗೇರ ಅವರು ಸ್ವಾಗತಿಸಿದರು. ಸಂಗೀತ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪಾರ್ಥಿಸಿದರು. ಪತ್ರಿಕೋದ್ಯಮ ವಿಭಾಗದ ಅಧ್ಯಾಪಕರಾದ ಪದ್ಮಾವತಿ ಕೆ. ನಿರೂಪಿಸಿದರು. ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ.ಎಸ್.ವೈ.ಸೋಮಶೇಖರ್ ವಂದಿಸಿದರು. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಸುಬ್ಬಣ್ಣ ರೈ, ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.