ಪುರಾಣ ಪ್ರವಚನದಿಂದ ದೈಹಿಕ ಶಕ್ತಿ, ಮಾನಸಿಕ ಶಾಂತಿ


ಸಂಜೆವಾಣಿ ವಾರ್ತೆ
ಕುರುಗೋಡು:ಅ.21: ಇಂದಿನ ದಿನಮಾನದಲ್ಲಿ ಮನುಷ್ಯ ನೆಮ್ಮದಿ ಇಲ್ಲದ ಜೀವನ ಸಾಗಿಸುತ್ತಿದ್ದಾನೆ. ಹಾಗಾಗಿ ಪುರಾಣ ಪ್ರವಚನದಿಂದ ದೈಹಿಕ ಶಕ್ತಿ ಮತ್ತು ಮಾನಸಿಕ ಶಾಂತಿ ಲಭಿಸುತ್ತದೆ ಎಂದು ಪ್ರವಚನಕಾರ ಎಸ್.ಗಾದಿಲಿಂಗ ಗುರುವಾರ ರಾತ್ರಿ ತಿಳಿಸಿದರು.
ಅವರು ಪಟ್ಟಣದ ಬಳ್ಳಾರಿ ರಸ್ತೆಯಲ್ಲಿರುವ ಶ್ರೀ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ದೇವಸ್ಥಾನ ಸೇವಾ ಸಮಿತಿಯ ಭಕ್ತರು ಹಮ್ಮಿಕೊಂಡಿರುವ ಶ್ರೀ ದೇವಿ ಪುರಾಣದಲ್ಲಿ ಮಾತನಾಡಿದರು.
ಪುರಾಣದಲ್ಲಿ ಬರುವ ಪಾತ್ರಗಳ ದರ್ಶನ ಹಾಗೂ ಸನ್ನಿವೇಶಗಳಿಂದ ಮನುಷ್ಯನಲ್ಲಿನ ಅರಿಷ್ಡವರ್ಗಗಳನ್ನು ಅಳಿಸುತ್ತದೆ, ಅಲ್ಲದೆ ಆದರ್ಶದ ಹಾದಿಯಲ್ಲಿ ಸಹಬಾಳ್ವೆಯ ಸಮಾಜವನ್ನು ನಿರ್ಮಿಸಲು ಮನುಷ್ಯ ಮುಂದಾಗುತ್ತನೆ ಇಂಥಹ ಪುರಾಣಗಳನ್ನು ಸದ್ಬಕ್ತರು ಆಗಾಗ ಸಂಘಟಿಸಬೇಕು ಹಾಗೂ ಪುರಾಣದಲ್ಲಿನ ಉತ್ತಮ ಆದರ್ಶಗಳನ್ನು ಜೀವನದಲ್ಲಿ ಆಳವಡಿಸಿಕೊಂಡಾಗ ಜೀವನ ಪಾವನವಾಗುತ್ತದೆ ಎಂದು ಸಲಹೆ ನೀಡಿದರು.
ಪ್ರಾರಂಭದಲ್ಲಿ ಶ್ರೀ ಕಾಳಿಕಾ ದೇವಿಗೆ ಮತ್ತು ಯಲ್ಲಮ್ಮ ದೇವಿಗೆ ಹೂ ಮಾಲೆ ಹಾಕಿ ಪೂಜೆ ಸಲ್ಲಿಸುವುದರ ಮೂಲಕ ದೇವೀ ಪುರಾಣಕ್ಕೆ ಶಿವಶರಣೆ ಯಲ್ಲಮ್ಮ ತಾಯಿ ಚಾಲನೆ ನೀಡಿದರು.
ಸಂಗೀತ ಮತ್ತು ಹಾರ್ಮೋನಿಯಂ ವಾದಕ ಬಾದನಹಟ್ಟಿ ಕೆ.ನಾಗೇಶ್, ಪುರಾಣ ಪಠಣಕಾರ ಕೆ.ಜಗದೀಶ್, ಹೆಚ್.ಮಲ್ಲನಗೌಡ ತಬಲ ಸಾತ್ ನೀಡಿದರು. ಭಜನೆ ಪದ ಬಾದನಹಟ್ಟಿ ಗಾಳಿ ಕರಿಬಸವ ಹಾಡಿದರು.
ಈ ಸಂದರ್ಭದಲ್ಲಿ ಶ್ರೀ ಯಲ್ಲಮ್ಮ ದೇವಿಯ ಸೇವಾ ಸಮಿತಿ ಸದ್ಬಕ್ತರು ಸೇರಿದಂತೆ ಇನ್ನಿತರ ಭಕ್ತರು ಇದ್ದರು.