ಪುರಾಣ ಕಾಲದಿಂದಲೂ ಖಗೋಲ ಶಾಸ್ತ್ರದ ಅರಿವು ಭಾರತೀಯರಲ್ಲಿತ್ತು: ಕಲ್ಕೂರ

ಮಂಗಳೂರು, ಎ.೧೮- ಭಾರತೀಯರಿಗೆ ಪುರಾಣ ಕಾಲದಿಂದಲೂ ನಕ್ಷತ್ರ, ರಾಶಿ, ಸಂವತ್ಸರ ಇತ್ಯಾದಿ ಖಗೋಲ ಶಾಸ್ತ್ರದಿಗಳಿಗೆ ಸಂಬಂಧಿತ ಅರಿವು ಇತ್ತು, ಪಂಚಾಂಗ ಪಠನದ ಮೂಲಕ ಈ ಜ್ಞಾನ ಅನೂಚಾನವಾಗಿ ಬೆಳೆದು ಬಂದಿದ್ದು ಹೊಸ ವರ್ಷಾಚರಣೆಯಾದ ಯುಗಾದಿ ಹಬ್ಬದ ಸಂದರ್ಭ ಪಂಚಾಂಗ ಶ್ರಣ ಮಾಡುವ ಮೂಲಕ ಜ್ಞಾನದ ಪ್ರಸರಣ ನಡೆಯುತ್ತಿದೆ. ಈ ಪರಂಪರೆಯು ಮುಂದಿನ ಪೀಳಿಗೆಗೂ ತಲುಪಬೇಕೆಂಬ ಮಹಾತ್ವಕಾಂಕ್ಷೆಯಿಂದ ಕಲ್ಕೂರ ಪ್ರತಿಷ್ಠಾನವು ವರ್ಷಂಪ್ರತಿ ‘ಬಿಸುಕಣಿ’ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ನುಡಿದರು. ಕಲ್ಕೂರ ಪ್ರತಿಷ್ಠಾನದ ವತಿಯಿಂದ ಚಂದ್ರಮಾನ ಯುಗಾದಿಯಂದು ಬಿಸು ಹಬ್ಬವನ್ನು ಆಚರಿಸಿದ ಸಂದರ್ಭ ಅವರು ಮಾತನಾಡಿದರು.

ನಗರದ ಕದ್ರಿ ಕಂಬ್ಳ ರಸ್ತೆಯ ಮಲ್ಲಿಕಾ ಬಡಾವಣೆಯಲ್ಲಿರುವ ‘ಮಂಜುಪ್ರಾಸಾದ’ ವಿಶ್ವೇಶ್ವರ ಮಂಟಪದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಹಿರಿಯ ವೇದ ವಿದ್ವಾಂಸ, ರಾಜಪುರೋಹಿತ ವೆ|ಮೂ| ಗಣಪತಿ ಆಚಾರ್ಯರ ಮಾರ್ಗದರ್ಶನದೊಂದಿಗೆ, ವೆ|ಮೂ| ಡಾ. ಪ್ರಭಾಕರ ಅಡಿಗರಿಂದ ಪಂಚಾಂಗ ಶ್ರವಣದ ಫಲಶೃತಿ ನಡೆಯಿತು. ವಿಕೃತದ ನಿವಾರಣೆಯಾಗಿ ಸುಕೃತದ ಫಲ ಪ್ರಾಪ್ತಿಯಾಗಲೆಂದು ಭಗವಂತನಲ್ಲಿ ಪ್ರಾರ್ಥಿಸಲಾಯಿತು. ಈ ಸಮಾರಂಭದಲ್ಲಿ ಹಿರಿಯ ವಿದ್ವಾಂಸರಾದ ಪೊಳಲಿ ನಿತ್ಯಾನಂದ ಕಾರಂತ, ಪ್ರಭಾಕರ ರಾವ್ ಪೇಜಾವರ, ತಾರಾನಾಥ ಹೊಳ್ಳ, ಮುರಳಿ ಭಟ್, ಚಂದ್ರಶೇಖರ ಮಯ್ಯ, ಡಾ. ಎಂ. ಪ್ರಭಾಕರ ಜೋಶಿ, ಜನಾರ್ದನ ಹಂದೆ, ಸುಧಾಕರ ರಾವ್ ಪೇಜಾವರ, ಪೂರ್ಣಿಮಾ ರಾವ್ ಪೇಜಾವರ, ವಿನೋದ ಕಲ್ಕೂರ ಮೊದಲಾದವರು ಪಾಲ್ಗೊಂಡಿದ್ದರು.

ಅಂಗಡಿಮಾರು ಕೃಷ್ಣ ಭಟ್ ರಚಿತ, ಅಷ್ಠ ಮಠಗಳ ಯತಿಗಳಿಂದ ಅನುಗ್ರಹಿತ ಸೌರಮಾನ ಪಂಚಾಂಗವನ್ನು ಈ ಸಂದರ್ಭ ವಿತರಿಸಲಾಯಿತು.