
ಧಾರವಾಡ,ಆ.7: ನಾಡಿನಾದ್ಯಂತ ಒಂದು ಒಳ್ಳೆ ಸಂಗೀತ ಶಿಷ್ಯ ಪರಂಪೆಯನ್ನು ಕೊಟ್ಟವರು ಗದುಗಿನ ಪಂಚಾಕ್ಷರಿ ಗವಾಯಿಗಳು ಹಾಗೂ ಪಂ. ಪುಟ್ಟರಾಜ ಗವಾಯಿಗಳು ಎಂದು ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್‍ನ ಗೌರವ ಸದಸ್ಯೆ ಭಾರತಿದೇವಿ ರಾಜಗುರು ಅವರು ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ನಂದಾ ಪಾಟೀಲ ದತ್ತಿ ಅಂಗವಾಗಿ ಆಯೋಜಿಸಿದ್ದ ಡಾ. ನಂದಾ ಪಾಟೀಲ ವಚನ ಸಂಗೀತ ಪುರಸ್ಕಾರ-2023 ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ವಿದ್ಯೆ ಸಾಗರವಿದ್ದಂತೆ, ಸಾಗರದಲ್ಲಿಯ ಒಂದು ಬೊಗಸೆಯಷ್ಟಾದರೂ ವಿದ್ಯೆಯನ್ನು ಕಲಿತು ಅದನ್ನು ಮುಂದುವರೆಸಬೇಕು. ಗದುಗಿನ ಪುಣ್ಯಾಶ್ರಮ ಬಡಮಕ್ಕಳಿಗಾಗಿ, ಅಂಧಮಕ್ಕಳಿಗಾಗಿ ಶ್ರಮಿಸಿ ನಾಡಿನಾದ್ಯಂತ ಪ್ರತಿಭಾವಂತ ಕಲಾವಿದರನ್ನು, ಸಂಗೀತಗಾರರನ್ನು, ನಾಟಕಗಳನ್ನು, ವಾದ್ಯಗಾರರನ್ನು ನೀಡಿದ ಹಿರಿಮೆ ಅದರದು. ಆ ಪರಂಪರೆಯಲ್ಲಿ ಬೆಳೆದಂಥ ಡಾ. ಅಯ್ಯಪಯ್ಯ ಹಲಗಲಿಮಠ ಯುವ ಸಂಗೀತಗಾರರಿಗೆ ಮಾದರಿಯಾಗಿದ್ದಾರೆ ಎಂದರು.
ದತ್ತಿ ದಾನಿಗಳಾದ ಡಾ. ಮಲ್ಲಿಕಾರ್ಜುನ ಪಾಟೀಲ ಮಾತನಾಡಿ, ಶರಣರು ನಾಡಿಗೆ ನೀಡಿದ ವಚನಗಳು ಇಂದಿನ ಯುವಜನತೆಗೆ ಸಂಗೀತ ರೂಪದಲ್ಲಿ ತಲುಪಿದಲ್ಲಿ ಪರಿಣಾಮ ಬೀರುತ್ತವೆ ಎನ್ನುವ ಕಾರಣಕ್ಕಾಗಿಯೇ ವಚನ ಸಂಗೀತ ಪುರಸ್ಕಾರವನ್ನ ನೀಡುವ ಉದ್ದೇಶವೆ ಈ ದತ್ತಿ. ವಚನ ಸ್ಪರ್ಧೆಯನ್ನು ಸಂಗೀತ ಮೂಲಕ ಏರ್ಪಡಿಸಿ, ವಚನಗಳನ್ನು ತಲುಪಿಸುವ ಸಲುವಾಗಿ ಯುವಸಂಗೀತ ಕಲಾವಿದರಿಗೆ ಈ ಪ್ರಶಸ್ತಿಯನ್ನು ದತ್ತಿ ಮೂಲಕ ನೀಡುತ್ತಿದ್ದೇವೆÉ ಎಂದರು.
ಅಧ್ಯಕ್ಷೀಯ ಮಾತುಗಳನ್ನಾಡಿದ ಚಂದ್ರಕಾಂತ ಬೆಲ್ಲದ, ಡಾ. ನಂದಾ ಪಾಟೀಲರು ಚಿಕ್ಕ ವಯಸ್ಸಿನಿಂದಲೇ ಪ್ರತಿಭಾವಂತ ಗಾಯಕರಾಗಿ ಹೊರಬಂದವರು. ಧಾರವಾಡದ ಮಣ್ಣಿನ ಗುಣವೇ ಅಂತಹದು. ಕರ್ನಾಟಕ ವಿದ್ಯಾವರ್ಧಕ ಸಂಘವು ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಸಂಗೀತ ಕಲಾವಿದರಾದ ಡಾ. ಅಯ್ಯಪ್ಪಯ್ಯ ಎಸ್. ಹಲಗಲಿಮಠ ಪ್ರಶಸ್ತಿ ಸ್ವೀಕರಿಸಿ, ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಸಾದ ಮಡಿವಾಳ ತಬಲಾ ಸಾಥ್, ವಿನೋದ ಪಾಟೀಲ ಹಾರ್ಮೋನಿಯಂ ಹಾಗೂ ತಂಬೂರಿ ಸಾಥ್ ಅಶೋಕ ನಿಂಗೋಲಿ ನೀಡಿದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಬ. ಹಿರೇಮಠ ನಿರೂಪಿಸಿದರು. ಡಾ. ಜಿನದತ್ತ ಹಡಗಲಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಡಾ. ಧನವಂತ ಹಾಜವಗೋಳ, ಎಸ್.ಎಸ್. ದೇಸಾಯಿ, ಸಿ. ಎಸ್. ಪಾಟೀಲ, ಅನಿಲ ಮೇತ್ರಿ, ಡಾ. ಅರ್ಜುನ ವಠಾರ, ಚೆನ್ನಯ್ಯ ಹಿರೇಮಠ, ಬಿ.ಎಸ್. ಶಿರೋಳ, ಸಂತೋಜಿ, ಶಂಕರ ಬೆಟಗೇರಿ, ಶರಣಮ್ಮ ಪಾಟೀಲ, ಪ್ರಕಾಶ ಮಲ್ಲಿಗವಾಡ, ಹೆಗ್ಗೆರಿ ಸೇರಿದಂತೆ ಸಂಗೀತ ಪ್ರೇಮಿಗಳು ಉಪಸ್ಥಿತರಿದ್ದರು.
\