ಪುರಸಭೆ ಹೆಸರಿಗೆ ಕಿಮ್ಮತ್ತಿಲ್ಲ

ವಿಜಯಪುರ, ಜು. ೧೬: ಪುರಸಭೆ ಅವಶ್ಯಕವಿರುವ ಯಾವುದೇ ವಸ್ತುಗಳನ್ನು ಯಾವುದೇ ಅಂಗಡಿಗಳಲ್ಲಿ ತುರ್ತಾಗಿ ಎರವಲು ಸಾಲದ ಆಧಾರದ ಮೇಲೆ ತೆಗೆದುಕೊಂಡು ಬರಲು ಸಾಧ್ಯವಾಗುವುದಿಲ್ಲವೆಂದು ಪುರಸಭೆಯ ಪರಿಸರ ಅಭಿಯಂತರರಾದ ಮಹೇಶ್ ಕುಮಾರ್ ತಿಳಿಸಿದರು.
ಅವರು ಇಲ್ಲಿನ ಪುರಸಭಾ ಕಚೇರಿಯಲ್ಲಿ ಪುರಸಭಾ ಅಧ್ಯಕ್ಷೆ ರಾಜಶ್ವರಿಭಾಸ್ಕರ್ ರವರ ಅಧ್ಯಕ್ಷತೆಯಲ್ಲಿ ಮುಂದುವರಿದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ಪುರಸಭೆಯ ಕಸಸಾಗಿಸುವ ವಾಹನಗಳ ರಿಪೇರಿಗೆ ಒಳಗಾದಲ್ಲಿ, ಕೊಳವೆಬಾವಿ ಯಂತ್ರಗಳು ತೊಂದರೆಗೊಳಗಾದಲ್ಲಿ, ತುರ್ತಾಗಿ ರಿಪೇರಿ ಮಾಡಿಸಲು ಪಟ್ಟಣದ ಪುರಸಭೆ ಹೆಸರು ಹೇಳಿದಾಗ ಸಾಲ ಕೊಡುವುದಿಲ್ಲವೆಂದು ತಿಳಿಸಿದರು.
೧೨ನೇ ವಾರ್ಡ್ ನ ಪುರಸಭೆ ಸದಸ್ಯ ನಂದಕುಮಾರ್ ಮಾತನಾಡಿ ವಾರ್ಡ್ ನಲ್ಲಿ ಹಲವು ಕೆಲಸಗಳು ನಡೆಯದೇ ಬಿಲ್ ಗಳು ಆಗಿರುವ ಬಗ್ಗೆ ಪ್ರಶ್ನಿಸಿ ಪ್ರತಿಯೊಂದು ಕೆಲಸದ ಬಗ್ಗೆಯೂ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು, ಇದಕ್ಕೆ ಇತರೆ ವಾರ್ಡ್‌ಗಳ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿಯೂ ಇದೇ ರೀತಿ ಕಾಮಗಾರಿ ನಡೆಯದೇ ಬಿಲ್‌ಗಳ ಆಗಿರುವ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
೧೩ನೇ ವಾರ್ಡ್ ನಾರಾಯಣಸ್ವಾಮಿ ಮಾತನಾಡಿ ಪುರಸಭೆ ಪ್ರತಿ ಮಾಸ ೫ಲಕ್ಷ ರೂ ಗಳಷ್ಟು ಬೀದಿದೀಪದ ಶುಲ್ಕ ಕಟ್ಟುವುದರೊಂದಿಗೆ ಹತ್ತಾರು ಲಕ್ಷ ರೂಗಳು ನೀಡಿ ಬೀದಿ ದೀಪಗಳ ನಿರ್ವಹಣೆಗೆ ಗುತ್ತಿಗೆ ನೀಡಿದ್ದು ಕಳೆದ ೧ ವರ್ಷದಿಂದ ತಮ್ಮ ವಾರ್ಡ್ ನಲ್ಲಿ ಹೈಮಾಸ್ಕ್ ದೀಪ ಸರಿಪಡಿಸಲಾಗಿಲ್ಲ ವೆಂದು ಆರೋಪಿಸಿದರು.
೧೭ ವಾರ್ಡ್ ನ ಬೈರೇಗೌಡ ಮಾತನಾಡಿ ಕಳೆದ ೬ತಿಂಗಳಲ್ಲಿ ತಮ್ಮ ವಾರ್ಡ್ ನಲ್ಲಿ ೩ಕೊಳವೆಬಾವಿಗಳನ್ನು ೩ಬಾರಿ ಮೋಟಾರ್ ಇಳಿಸಿ ಎತ್ತಿ ರಿಪೇರಿಗೆ ೧.೪೧ಲಕ್ಷ ರೂ ಗಳು ಬಿಲ್ ಆಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.
೬ನೇ ವಾರ್ಡ್‌ನ ಶಿಲ್ಪಾ ಅಜಿತ್ ಮಾತನಾಡಿ ವಾರ್ಡ್‌ನಲ್ಲಿ ಯಾವುದೇ ಕಾಮಗಾರಿ ಬಗ್ಗೆ ತುರ್ತು ಕೆಲಸಗಳ ಬಗ್ಗೆ ಕೇಳಿದರೂ, ಪುರಸಭೆ ಎಂಜಿನಿಯರ್ ಪುರಸಭೆಯಲ್ಲಿ ಸಭೆ ನಡೆಯಬೇಕು, ಟೆಂಡರ್ ಆಗಬೇಕು ಹೀಗೆ ಸಬೂಬುಗಳನ್ನು ಹೇಳಿಕೊಂಡು ಬರುತ್ತಿದ್ದರೆ ೩-೪ತಿಂಗಳುಗಳು ಕಳೆದರೂ ಒಂದೊಂದು ಸಭೆ ನಡೆಯದಿದ್ದರೆ ವಾರ್ಡ್ ನಲ್ಲಿನ ಕೆಲಸಗಳು ಹೇಗೆ ನಡೆಯಬೇಕು ಮತನೀಡಿದ ಜನಕ್ಕೆ ಉತ್ತರವಾದರೂ ಹೇಗೆ ತಿಳಿಸಬೇಕು ಎಂದು ಪ್ರಶ್ನಿಸಿದರು.
ಬೈರೇಗೌಡ ರವರು ಮಾತನಾಡುತ್ತಾ ಬಹಳಷ್ಟು ವಾಹನಗಳಿಗೆ ಎಫ್ ಸಿ ಆಗಿಲ್ಲ ಕ್ರಮಬದ್ಧ ರಿಜಿಸ್ಟ್ರೇಷನ್ ಇಲ್ಲ ಇನ್ಶೂರೆನ್ಸ್ ಕಟ್ಟಿರುವುದಿಲ್ಲ ಏನಾದರೂ ಅನಾಹುತ ನಡೆದರೆ ಯಾರು ಜವಾಬ್ದಾರಿ ಎಂದು ಪ್ರಶ್ನಿಸಿದರು.
ಪುರಸಭಾ ಮುಖ್ಯಾಧಿಕಾರಿ ಮೋಹನ್ ಕುಮಾರ್ ಉಪಾಧ್ಯಕ್ಷ ಕೇಶವಪ್ಪ , ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಿ. ನಾರಾಯಣಸ್ವಾಮಿ, ಪರಿಸರ ಇಂಜಿನಿಯರ್ ಮಹೇಶ್ ಸೇರಿದಂತೆ ಎಲ್ಲಾ ಪುರಸಭಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಎಲ್ಲಾ ಸದಸ್ಯರುಗಳು ಸಭೆಯಲ್ಲಿ ಹಾಜರಿದ್ದರು.