ಪುರಸಭೆ ಸಾಮಾನ್ಯ ಸಭೆ


ಲಕ್ಷ್ಮೇಶ್ವರ,ಅ.3: ಪಟ್ಟಣದ ಪುರಸಭೆಯ ಸಭಾ ಭವನದಲ್ಲಿ ಪುರಸಭೆ ಅಧ್ಯಕ್ಷೆ ಪೂರ್ಣಿಮಾ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಜರುಗಿತು. ಸಭೆ ಆರಂಭವಾಗುತ್ತಿದ್ದಂತೆಯೇ ಇತ್ತೀಚೆಗೆ ಅಗಲಿದ ಕನ್ನಡದ ಚಿತ್ರ ನಟ ಧೃವತಾರೆ ಪುನೀತ್ ರಾಜಕುಮಾರ್ ಅವರ ನಿಧನಕ್ಕೆ ಮೌನಾಚರಣೆ ಮಾಡಲಾಯಿತು.
ನಂತರ ಸಭೆಯ ಕಲಾಪ ಪಟ್ಟಿಯನ್ನು ಕೈಗೆತ್ತಿಕೊಂಡು ಆರಂಭಿಸುತ್ತಿದ್ದಂತೆ ಸದಸ್ಯ ಮಹೇಶ ಹೊಗೆಸೊಪ್ಪಿನ ಅವರು ಸೂಚನೆಯನ್ನು ಮಂಡಿಸಿ ಶಿಗ್ಲಿ ರಸ್ತೆಯಲ್ಲಿ ಆಶ್ರಯ ಯೋಜನೆಗಾಗಿ ಖರೀದಿಸಿರುವ 32 ಎಕರೆ 27 ಗುಂಟೆ ಜಮೀನನ್ನು ಬಡವರಿಗಾಗಿ ವಿತರಿಸ ಬೇಕಾಗಿತ್ತು ಆದರೆ ರಸ್ತೆ ಇಲ್ಲದೆ ಲೇಔಟ್ ಮಾಡಲು ತಾಂತ್ರಿಕ ಕಾರಣದಿಂದ ಬಡವರು ವಂಚಿತರಾಗುತ್ತಿದ್ದಾರೆ . ಇದರಲ್ಲಿ ಯಾರು ತಪ್ಪು ಮಾಡಿದ್ದಾರೆ ಎನ್ನುವುದಕ್ಕಿಂತಲೂ ಎಲ್ಲರೂ ಇದಕ್ಕೆ ಸಮರ್ಪಕ ಕಾರಣ ಹುಡುಕಿ ಬಡವರಿಗೆ ವಿತರಿಸಬೇಕು ಇಲ್ಲದಿದ್ದರೆ ವೈಯಕ್ತಿಕವಾಗಿ ಕಾನೂನು ಹೋರಾಟಕ್ಕೆ ಇಳಿಯಬೇಕಾಗಿತ್ತು ಎಂದು ಎಚ್ಚರಿಸಿದರು ಆಗ ವೇದಿಕೆಯ ಮೇಲಿದ್ದ ಉಪಾಧ್ಯಕ್ಷ ರಾಮಪ್ಪ ಗಡದವರ್ ಈ ಸಮಸ್ಯೆ ಪರಿಹಾರಕ್ಕೆ ಮೊದಲು ಪಟ್ಟಣದ ಇಬ್ಬರು ಹಿರಿಯರಾದ ಮಾಜಿ ಶಾಸಕರನ್ನು ಸಂಪರ್ಕಿಸಿ ಪರಿಹಾರ ಸೂತ್ರ ಕಂಡುಹಿಡಿಯೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಆಗ ಸಿಟ್ಟಿಗೆದ್ದ ಸದಸ್ಯ ಮಹೇಶ್ ಅವರು ಸಭೆಯಿಂದ ಹೊರಹೋಗಲು ಮುಂದಾಗುತ್ತಿದ್ದಂತೆಯೇ ಅವರನ್ನು ಸಮಾಧಾನಪಡಿಸಿ ಮತ್ತೆ ಸ್ಥಾನಕ್ಕೆ ತಂದು ಕುಳ್ಳಿರಿಸಲಾಯಿತು ಆಗ ಬಹುತೇಕ ಸದಸ್ಯರು ಇನ್ನೊಂದು ಬಾರಿ ಸಭೆ ಸೇರಿ ಕೂಲಂಕುಶ ವಿಚಾರಣೆ ಮಾಡಿ ಒಮ್ಮತದ ನಿರ್ಧಾರಕ್ಕೆ ಬರೋಣ ಎಂದು ವಿಷಯಕ್ಕೆ ತೆರೆ ಎಳೆದರು. ಇನ್ನುಳಿದಂತೆ ವಿಷಯಗಳು ಸಭೆಯಲ್ಲಿ ಚರ್ಚೆಯಾದವು.
ವೇದಿಕೆ ಮೇಲೆ ಸ್ಥಾಯಿಸಮಿತಿ ಅಧ್ಯಕ್ಷ ಮುಸ್ತಾಕ್ ಅಹ್ಮದ್ ಶಿರಹಟ್ಟಿ, ಮುಖ್ಯಾಧಿಕಾರಿ ಶಂಕರಮ್ಮನವರ ಇದ್ದರು.
ಚರ್ಚೆಯಲ್ಲಿ ರಾಜು ಕುಂಬಿ, ಬಸವರಾಜ ಓದು ನವರ, ಸಾಹೇಬ್ ಜಾನ್ ಹವಾಲ್ದಾರ್, ವಿಜಯ ಕರಡಿ, ಪ್ರವೀಣ ಬಾಳಿಕಾಯಿ, ಮಹೇಶ್ ಹುಲ್ ಬಜಾರ, ಅರುಣ್ ಪಾಟೀಲ್, ವಿಜಯ್ ಕುಂಬಾರ, ಜಯಕ್ಕ ಕಳ್ಳಿ, ಅಶ್ವಿನಿ ಅಂಕಲಕೋಟಿ, ಸೇರಿದಂತೆ ಅನೇಕ ಸದಸ್ಯರು ಪಾಲ್ಗೊಂಡಿದ್ದರು. ಸಭೆಯಲ್ಲಿ ಇಂಜಿನಿಯರ್ ವೀರೇಂದ್ರ ಕಾಟೆವಾಲ್, ಮ್ಯಾನೇಜರ್ ಮಂಜುಳಾ ಹೂಗಾರ್, ಬಿ ಎಸ್ ಬಳಗಾನೂರ, ಶಿವಣ್ಣ ಮ್ಯಾಗೇರಿ, ಆರ್ ಎಂ ಪಾಟೀಲ್ ಭಾಗವಹಿಸಿದ್ದರು.