ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಕಾಂಗ್ರೆಸ್ ಸದಸ್ಯರ ಬಂಡಾಯ:ಪಂಕಜಾ ರಾವೂರ್ ಹಠಾವೋ, ಪುರಸಭೆ ಬಚಾವೋ ಚಳುವಳಿ

ಅಫಜಲಪುರ : ಮಾ.15:ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ಪಂಕಜಾ ರಾವೂರ್ ಅವರ ಕಾರ್ಯವೈಖರಿಯ ವಿರುದ್ಧ ಸಿಡಿದೆದ್ದಿರುವ ಆಡಳಿತ ಪಕ್ಷದ ಕಾಂಗ್ರೆಸ್ ಸದಸ್ಯರು ಪಂಕಜಾ ರಾವೂರ್ ಹಠಾವೋ, ಪುರಸಭೆ ಬಚಾವೋ ಘೋಷಣೆಯೊಂದಿಗೆ ಹೋರಾಟ ಪ್ರಾರಂಭಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಮಂಗಳವಾರ ಪುರಸಭೆಯ ಅಧ್ಯಕ್ಷೆ ಶ್ರೀಮತಿ ಶಾಹಿದಾ ಬೇಗಂ ರೌಫ ಅವರು ಮಾತನಾಡಿ, ನಾವು ಆಯ್ಕೆಯಾದ ನಮ್ಮ ವಾಡ್ರ್ಗಳಲ್ಲಿ ಚರಂಡಿಗಳಲ್ಲಿ ಕಸ ತೆಗೆಯುತ್ತಿಲ್ಲ. ಚರಂಡಿ ಸ್ವಚ್ಛ ಮಾಡುತ್ತಿಲ್ಲ. ಬಲ್ಬ್ಗಳನ್ನು ಹಾಕುತತಿಲ್ಲ. ಕಸದ ರಾಶಿ ತುಂಬಿ ತುಳುಕುತ್ತಿದೆ. ಕಸ ಒಯ್ಯುವವರು ಯಾರೂ ದಿಕ್ಕಿಲ್ಲ. ವಾಡ್ರ್ಗಳ ಮತದಾರರು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಪುರಸಭೆಯ ಅಧಿಕಾರಿ ಪಂಕಜಾ ರಾವೂರ್ ಅವರು ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿದರು.
ಬಹುತೇಕ ವಾಡ್ರ್ಗಳಲ್ಲಿ ಚರಂಡಿಗಳು ತುಂಬಿ ರಸ್ತೆಯ ಮೇಲೆ ಕೊಳೆತ ನೀರಿನಿಂದ ಗಬ್ಬು ವಾಸನೆ ಬರುತ್ತಿದೆ. ಕಸ ಬಿದ್ದರೂ ಸಹ ಅದನ್ನು ಸ್ವಚ್ಛಗೊಳಿಸುವ ಗೋಜಿಗೂ ಹೋಗುತ್ತಿಲ್ಲ. ನಾವು ಕೇಳಿದರೆ ನೋಡಿ ಮಾಡಿಸೋಣ ಎಂದು ಹೇಳುತ್ತಾರೆ. ಅವರ ಬೇಜವಾಬ್ದಾರಿಯಿಂದ ಹಾಗೂ ಅವರ ಆವಾಂತರದಿಂದ ನಾವುಗಳು ನಮ್ಮನ್ನು ಆಯ್ಕೆ ಮಾಡಿದ ಜನರ ಪಾದರಕ್ಷೆಗಳಿಂದ ಹೊಡೆಸಿಕೊಳ್ಳುವ ಪರಿಸ್ಥಿತಿ ಬಂದಿದೆ. ನಮ್ಮನ್ನು ಆಯ್ಕೆ ಮಾಡಿದ ಜನರಿಂದ ನಾವು ದಿನನಿತ್ಯ ವಾಚಾಮ ಗೋಚರವಾಗಿ ಬೈಯಿಸಿಕೊಳ್ಳುವಂತಾಗಿದೆ ಎಂದು ಅವರು ತೀವ್ರ ಆಕ್ರೋಶ ಹೊರಹಾಕಿದರು.
ಕೆಲವು ವಾಡ್ರ್ಗಳಲ್ಲಿ ವಿದ್ಯುತ್ ದ್ವೀಪಗಳು ಹಾಕಲು ಹಿಂದೇಟು ಹಾಕುತ್ತಾರೆ. ಯಂತ್ರಗಳು ಕೆಟ್ಟು ನಿಂತರೆ ದುರಸ್ಥಿ ಮಾಡುತ್ತಿಲ್ಲ. ಯಾವುದೇ ವಾಡ್ರ್ಗೆ ಮುಖ್ಯಾಧಿಕಾರಿ ಸೇರಿದಂತೆ ಯಾವೊಬ್ಬ ಅಧಿಕಾರಿಗಳಾಗಲಿ, ಸಿಬ್ಬಂದಿಗಳಾಗಲಿ ಭೇಟಿ ನೀಡುತ್ತಿಲ್ಲ. ಅಧಿಕಾರಿಗಳು, ಸಿಬ್ಬಂದಿಗಳು ಕೇಂದ್ರ ಸ್ಥಾನದಲ್ಲಿರದೇ ಕಲಬುರ್ಗಿಯಲ್ಲಿ ಮನೆ ಮಾಡಿಕೊಂಡು ಬೇಕಾಬಿಟ್ಟಿಯಾಗಿ ಹೋಗುವುದು, ಬರುವುದು ಮಾಡುತ್ತಿದ್ದಾರೆ. ಹೀಗಾಗಿ ಜನರ ಕೆಲಸಗಳು ಆಗುತ್ತಿಲ್ಲ. ಎಲ್ಲ ವಾಡ್ರ್ಗಳ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಕಾಟಾಚಾರಕ್ಕಾಗಿ ಪುರಸಭೆ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ ಮುಖ್ಯಾಧಿಕಾರಿಗಳು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ತಮ್ಮ ಮನಸ್ಸಿಗೆ ಬಂದಾಗ ಬರುವುವುದು, ಕಲಬುರ್ಗಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ಇದೆ ಎಂದು ನೆಪ ಹೇಳಿ ಮನಸ್ಸೋಚ್ಛೆ ಯಾರೊಬ್ಬರಿಗೂ ತಿಳಿಸದೇ ಹೋಗುವುದು ಮಾಡುತ್ತಾರೆ. ಹೀಗಾಗಿ ಸಮಸ್ಯೆಗಳು ಬಗೆಹರಿಯುತ್ತಿಲ್ಲ ಎಂದು ಅವರು ತೀವ್ರ ಅಸಮಾಧಾನ ಹೊರಹಾಕಿದರು.
ಪುರಸಭೆ ಅನುದಾನ ಕೊರತೆ ಇರುವುದರಿಂದ ಮುಖ್ಯಾಧಿಕಾರಿಗಳು ಓಡಾಡಲು ಬಳಸುತ್ತಿರುವ ವಾಹನ ರದ್ದುಪಡಿಸುವಂತೆ, ವಿವಿಧ ವಾಡ್ರ್ಗಳ ಅಭಿವೃಧ್ಧಿಗೆ ಒತ್ತು ನೀಡುವಂತೆ, ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಹೂಡುವಂತೆ ಮುಖ್ಯಾಧಿಕಾರಿಗಳಿಗೆ ಎಚ್ಚರಿಕೆಯ ಪತ್ರವನ್ನು ಕೊಡಲಾಗಿದೆ ಎಂದು ಅವರು ಹೇಳಿದರು.
ಪುರಸಭೆಯ ಹಿರಿಯ ಸದಸ್ಯ ಬಿಲ್ಲಮರಾಜ್ ಮ್ಯಾಳೇಸಿ ಅವರು ಮಾತನಾಡಿ, ನಾನು ಯಾಕಾದರೂ ಪುರಸಭೆಯ ಸದಸ್ಯನಾಗಿ ಆಯ್ಕೆಯಾಗಿದ್ದೇನೆ ಎನ್ನುವಂತಾಗಿದೆ. ಶಾಸಕ ಎಂ.ವೈ. ಪಾಟೀಲ್ ಅವರು ಯಾಕಾದರೂ ನನಗೆ ಪುರಸಭೆ ಚುನಾವಣೆಗೆ ನಿಲ್ಲಿಸಿದ್ದಾರೆ ಎನ್ನುವಂತಾಗಿದೆ. ನಾನು ಆಯ್ಕೆಯಾದ ವಾಡ್ನಿರ್ಂದ ಪುರಸಭೆಯಿಂದ ಸಮಸ್ಯೆಗಳು ಬಗೆಹರಿಸಲು ಆಗುತ್ತಿಲ್ಲ. ಮುಖ್ಯಾಧಿಕಾರಿಗಳು ನನ್ನ ಸಹೋದರಿ ಇದ್ದ ಹಾಗೆ. ಆದಾಗ್ಯೂ, ನಾನೊಬ್ಬ ಹಿರಿಯ ಅನ್ನುವುದನ್ನು ಮರೆತು ನನ್ನ ಮಾತಿಗೆ ಸ್ಪಂದಿಸುತ್ತಿಲ್ಲ. ನನಗೀಗ ಕೆಲವೇ ದಿನಗಳಲ್ಲಿ 63 ವರ್ಷಗಳು ಆಗಲಿವೆ. ಇಂತಹ ಇಳಿ ವಯಸ್ಸಿನಲ್ಲಿ ಪುರಸಭೆಗೆ ಆಯ್ಕೆಯಾಗಬಾರದಿತ್ತು ಎದು ಪಶ್ಚಾತಾಪ ಹಾಗೂ ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮನ್ನು ಆಯ್ಕೆ ಮಾಡಿದ ಜನರು ನಮ್ಮಿಂದ ಏನಾದರೂ ಕೆಲಸವಾಗುತ್ತದೆ ಎಂದು ನಿರೀಕ್ಷೆ ಇಟ್ಟಿರುತ್ತಾರೆ. ಆ ನಿರೀಕ್ಷೆ ಇಂತಹ ಪುರಸಭೆ ಮುಖ್ಯಾಧಿಕಾರಿಗಳಿಂದ ಮಾಡುವುದು ತಪ್ಪು ಎನ್ನುವ ಭಾವನೆ ಬಂದಿದೆ. ನಮ್ಮ ವಾಡ್ರ್ಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ನೀರಿನ ಬೋರವೆಲ್‍ಗಳನ್ನು ಕೆಟ್ಟು ನಿಂತು ಸಮಸ್ಯೆಗಳು ಉದ್ಭವಿಸಿದರೂ ಸಹ ಗಮನಕ್ಕೆ ತಂದರೂ ಸಹ ಆ ಯಾವುದೇ ಸಮಸ್ಯೆಗಳನ್ನು ಪರಿಹರಿಸಲಾರರು. ಬದಲಾಗಿ ಪುರಸಭೆಯಲ್ಲಿ ಹಣವಿಲ್ಲ ಎಂದು ಹೇಳುತ್ತಾರೆ. ಹೀಗಾಗಿ ಜನರ ಸಮಸ್ಯೆಗಳನ್ನು ಪರಿಹರಿಸಲು ನಾವು ಕೈಯಿಂದ ಹಣ ಹಾಕಿ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. ಕೆಲಸ ಮಾಡಿದಾಗ ಅವುಗಳ ಬಿಲ್‍ನ್ನು ಪಾವತಿಸಬೇಕು. ನನಗೂ ಸಏರಿದಂತೆ ಯಾವೊಬ್ಬ ಸದಸ್ಯರ ಬಿಲ್‍ಗಳನ್ನು ಇಲ್ಲಿಯವರೆಗೆ ಮುಖ್ಯಾಧಿಕಾರಿಗಳು ಮಾಡಿಲ್ಲ. ಆ ಕುರಿತು ಕೇಳಿದರೆ ಕಾನೂನು ಪಾಠದ ಬೋಧನೆ ಮಾಡುತ್ತಾರೆ ಎಂದು ಅವರು ದೂರಿದರು.
ಮುಖ್ಯಾಧಿಕಾರಿಗಳಿಗೆ ವಾಹನದಲ್ಲಿ ಓಡಾಡಲು ಪರವಾನಿಗೆ ಕೊಟ್ಟವರಾರು? ಎಂದು ಪ್ರಶ್ನಿಸಿದ ಅವರು, ಪ್ರತಿ ತಿಂಗಳು ಮುಖ್ಯಾಧಿಕಾರಿಗಳು ತಮ್ಮ ವಾಹನಕ್ಕೆ 40,000ರೂ.ಗಳು ಪೆಟ್ರೋಲ್ ಹಾಗೂ ಇತರೆ ಖರ್ಚು ಹಾಕುತ್ತಾರೆ. ಅದಕ್ಕೆ ಅವರಿಗೆ ಯಾವ ಕಾನೂನಿನ ಅಡಿಯಲ್ಲಿ ಎಲ್ಲಿಂದ ಅನುದಾನ, ಹಣದ ಖರ್ಚು, ವೆಚ್ಚ ಹಾಕುತ್ತಾರೆ? ಸಾರ್ವಜನಿಕರ ತೆರಿಗೆಯಿಂದ ವಾಹನಕ್ಕೆ ಪೆಟ್ರೋಲ್ ಹಾಕಿಸಿಕೊಳ್ಳುವ ಅವಶ್ಯಕತ ಏನಿದೆ? ಎಂದು ಕೇಳಿದರು.
ಪುರಸಭೆ ಸದಸ್ಯ ರವಿ ನಂದಿಶೆಟ್ಟಿ, ಶಿವು ಪದಕಿ ಅವರು ಮಾತನಾಡಿ, ಬ್ಲೀಚಿಂಗ್ ಪೌಡರ್ ಒಂದು ವರ್ಷದ ವಾರ್ಷಿಕ ಟೆಂಡರ್ ಕರೆದರೂ ಸಹ ನಮಗೊಂದು ಮಾತು ಕೇಳದೇ ಮುಖ್ಯಾಧಿಕಾರಿಗಳೇ ಖುದ್ದಾಗಿ ಕಡಿಮೆ ದರದಲ್ಲಿ ಖರೀದಿಸಿದ್ದಾರೆ. ಹೆಚ್ಚಿನ ದರದಲ್ಲಿ ಲೆಕ್ಕ ತೋರಿಸುತ್ತಾರೆ. ಕಸ ವಿಲೇವಾರಿ ಮಾಡುವ ಜಾಗದಲ್ಲಿ 200 ಚೀಲ ಬ್ಲೀಚಿಂಗ್ ಪೌಡರ್ ಹಾಕಿದ್ದಾರೆ. ಇದು ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ಯಾವುದೇ ಸದಸ್ಯರ ಗಮನಕ್ಕೆ ತರದೇ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಕೂಡಲೇ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಪುರಸಭೆಯ ಉಪಾಧ್ಯಕ್ಷೆ ಶ್ರೀಮತಿ ಕಾವೇರಿ ರಾಠೋಡ್, ಸದಸ್ಯರಾದ ಸುನಂದಾ ಜಮಾದಾರ್, ರೇಣುಕಾ ಪಾಟೀಲ್, ಪ್ರಿಯಾಂಕ ಮಲಘಾಣ್ ಸೇರಿದಂತೆ ಬಹುತೇಕ ಎಲ್ಲ ಕಾಂಗ್ರೆಸ್ ಸದಸ್ಯರು ಮುಖ್ಯಾಧಿಕಾರಿಗಳ ವಿರುದ್ಧ ಕಿಡಿಕಾರಿ ಸಮಸ್ಯೆಗಳ ಭಿತ್ತಿಪತ್ರಗಳನ್ನು ಪ್ರದರ್ಶಿಸುವ ಮೂಲಕ ಪುರಸಭೆಯ ಮುಖ್ಯಾಧಿಕಾರಿಗಳ ವಿರುದ್ಧ ಹರಿಹಾಯ್ದರು.
ಶೀಘ್ರ ಪಂಕಜಾ ರಾವೂರ್ ಅವರನ್ನು ಪದಚ್ಯುತಿಗೊಳಿಸಿ ಪುರಸಭೆಯನ್ನು ರಕ್ಷಿಸಬೇಕು ಎಂದು ಆಗ್ರಹಿಸಿದ ಅವರು, ಈ ಸಂಬಂಧ ಕಾಂಗ್ರೆಸ್ಸಿನ 17 ಜನ ಪುರಸಭೆ ಸದಸ್ಯರು ಜಿಲ್ಲಾಧಿಕಾರಿಗಳ ಹತ್ತಿರ ನಿಯೋಗದಲ್ಲಿ ಹೋಗಿ ಮನವಿ ಪತ್ರ ಸಲ್ಲಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಪುರಸಭೆಯ ಸದಸ್ಯರಾದ ಬಾಬು ಹಳ್ಯಾಳ್, ಯಮನಪ್ಪ ಭಾಸಗಿ, ಮುಖಂಡರಾದ ರಾಜಶೇಖರ್ ಪಾಟೀಲ್, ವಿಶ್ವನಾಥ್ ಮಲಘಾಣ್, ಶ್ರೀಧರ್ ರಾಠೋಡ್, ಅಂಬಾರಾಯ್ ಹರಳಯ್ಯ ಮುಂತಾದವರು ಉಪಸ್ಥಿತರಿದ್ದರು.